ಚನ್ನರಾಯಪಟ್ಟಣದ ಟೈಮ್ಸ್ ಪಿಯು ಕಾಲೇಜಿನಲ್ಲಿ ಸಾರಿಗೆ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ ಮಾತನಾಡಿದರು. ಎನ್.ಕುಮಾರ್, ಎ.ಸಿ.ಸುನೀಲ್ ಕುಮಾರ್, ಎನ್.ಆರ್.ಆಶಾ, ಎಸ್.ಎಸ್.ಪಾಷಾ ಇದ್ದರು.  
ಹಾಸನ

ಯುವ ಜನರಲ್ಲಿ ಕಾನೂನು ತಿಳಿವಳಿಕೆ ಕೊರತೆ

ಲೋಕೇಶ್ ಮನು. ಡಿ
ಚನ್ನರಾಯಪಟ್ಟಣ: ಬಹುತೇಕ ಯುವ ಜನರಲ್ಲಿ ಕಾನೂನು ತಿಳಿವಳಿಕೆ ಕೊರತೆ ಹೆಚ್ಚಿದೆ. ರಸ್ತೆ ನಿಯಮಗಳ ಪಾಲನೆ ಪ್ರಮಾಣ ಕಡಿಮೆಯಾಗುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ, ನಿತ್ಯ ಸಾವು-ನೋವು ಸಂಭವಿಸುತ್ತಿವೆ ಎಂದು ಸಾರಿಗೆ ವಾಹನ ನಿರೀಕ್ಷಕಿ ಎನ್.ಆರ್. ಆಶಾ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಟೈಮ್ಸ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಸಾರಿಗೆ ಇಲಾಖೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಹಾಗೂ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಅಪಘಾತಗಳನ್ನು ತಪ್ಪಿಸಬೇಕಾದರೆ ಪ್ರತಿಯೊಬ್ಬ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಬೇಕು. ವಾಹನ ಚಾಲನೆ ಪರವಾನಗಿ ಹೊಂದಿರಬೇಕು. ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಬಗ್ಗೆ ಮಾಹಿತಿ ಪಡೆದಿರಬೇಕು. ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳಗಳನ್ನು ಗಮನಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನ ನಿಲುಗಡೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಲಘು ವಾಹನಗಳ ಚಾಲಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡಿದರೆ ಶೇ.90ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಅಂಕಿ ಅಂಶಗಳು ಸಾಬೀತು ಪಡಿಸಿವೆ. ಅದೇ ರೀತಿ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಅವಕಾಶ ನೀಡದೆ ಪಾಲಕರು ಮತ್ತು ಶಿಕ್ಷಕ ವರ್ಗದವರು ಅರಿವು ಮೂಡಿಸಬೇಕು. ಈ ಮಾಹಿತಿಯನ್ನು ಮತ್ತು ಅರಿವನ್ನು ಎಲ್ಲ ಸಾರ್ವಜನಿಕರಿಗೂ ತಿಳಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ರಸ್ತೆ ಅಪಘಾತ ತಡೆಗಟ್ಟಲು ಮತ್ತು ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ ಮಾತನಾಡಿ, ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ, ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಬಾಲ್ಯವಿವಾಹ ಆಗಾಗ್ಗೆ ನಡೆಯುತ್ತಲೇ ಇವೆ, ಮುಖ್ಯವಾಗಿ ತಂದೆ ತಾಯಿಯಲ್ಲಿ ಮನ ಪರಿವರ್ತನೆ ಆಗಬೇಕು ಎಂದು ತಿಳಿಸಿದರು.
ಆರಕ್ಷಕ ಉಪ ಅಧೀಕ್ಷಕ ಎನ್.ಕುಮಾರ್ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಸ್.ಎಸ್.ಪಾಷಾ, ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಸಿ.ಸುನೀಲ್ ಕುಮಾರ್, ಬೋಧಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.