ಹೊಳೆನರಸೀಪುರದಲ್ಲಿ ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. 
ಹಾಸನ

ಕೇಂದ್ರ ಕಾಯ್ದೆಗಳು ಗ್ರಾಮಗಳ ಅಭಿವೃದ್ಧಿ ಮಾರಕ

ಹೊಳೆನರಸೀಪುರ: ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ರೈತರ ಕೂಲಿ ಕಾರ್ಮಿಕರ ಬದುಕಿಗೆ ವಿರುದ್ಧವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವುದು ಖಂಡನೀಯ ಎಂದು ಸಂಸದ ಶ್ರೇಯಸ್ ಎಂ .ಪಟೇಲ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವತಿಯಿಂದ ಸೋಮವಾರ ಪಟ್ಟಣದ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ದುಡಿಮೆಗೆ ಮಾರಕವಾಗಿದೆ. 2005 ಸೆಪ್ಟೆಂಬರ್ 7ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಗ್ರಾಮೀಣ ಭಾಗದ ಜನರ ಆಶಾಕಿರಣ ಯೋಜನೆ ಆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿ ಮಾಡಿತು. ಆದರೆ ಕೇಂದ್ರ ಸರ್ಕಾರ ಈ ಯೋಜನೆಯ ಹೆಸರನ್ನು ವಿಕಸಿತ ಭಾರತ ಜಿ ರಾಮ್ ಜಿ ಎಂಬುದಾಗಿ ತಿರುಚಿಸುವ ಮೂಲಕ ಬಡ ಕೂಲಿ ಕಾರ್ಮಿಕರ ದುಡಿಮೆಗೆ ವಿರುದ್ಧ ತೀರ್ಮಾನ ತೆಗೆದುಕೊಂಡು ಹಾಳು ಮಾಡುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೆಸರಿಗೆ ಅವಮಾನ ಮಾಡಿದೆ. ಅಹಿಂಸಾ ತತ್ವದಿಂದ ದೇಶಕ್ಕೆ ಸ್ವಾತಂತ್ರ ಗಳಿಸುವಲ್ಲಿ ಮುಂಚೂಣಿ ರಾಷ್ಟ್ರ ನಾಯಕರಾದ ಇವರ ಹೆಸರನ್ನೇ ಸಹಿಸಿಕೊಳ್ಳದ ಬಿಜೆಪಿ ಸರ್ಕಾರ ತಪ್ಪು ನಿರ್ಧಾರಗಳಿಂದ ಸುದ್ದಿ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಕೇಂದ್ರ ಸರ್ಕಾರ ಈ ಯೋಜನೆಯ ಮೂಲ ಸ್ವರೂಪವನ್ನು ಬದಲಿಸದೆ ಮನರೇಗಾ ಎಂಬುದಾಗಿ ಮುಂದುವರಿಸಬೇಕು. ಹಿಂದೆ ನೀಡುತ್ತಿದ್ದ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ರಸ್ತೆ ಚರಂಡಿ ಶೌಚಾಲಯ ಅಭಿವೃದ್ಧಿ ಹಾಗೂ ರೈತರ ಜಮೀನುಗಳಲ್ಲಿ ಬದು ನಿರ್ಮಾಣ, ನೀರುಗಾಲ್ವೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳ ಅಭಿವೃದ್ಧಿ ಕೃಷಿ ಹೊಂಡ, ಕುರಿ ಮೇಕೆ ಜಾನುವಾರುಗಳ ಸೆಡ್ಡು, ಮೀನು ಸಾಗಾಣಿಕೆ ಇತ್ಯಾದಿ ಅಭಿವೃದ್ಧಿ ಕೆಲಸಗಳನ್ನು ಯೋಜನೆಯಡಿ ನಿರ್ವಹಿಸುತ್ತಿದ್ದರೂ ಇದರ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತಿತ್ತು. ಆದರೆ ಅನುದಾನ ಒದಗಿಸಬೇಕಾಗುತ್ತದೆ ಎಂಬ ದುರುದ್ದೇಶದಿಂದ ರಾಜ್ಯಗಳಿಗೂ ಅನುದಾನ ನೀಡುವಂತೆ ಕಾಯ್ದೆ ಮಾಡಿರುವುದು ದ್ರೋಹ ಮಾಡಿದಂತಾಗಿದೆ. ಯೋಜನೆಯ ಮೂಲ ಹೆಸರನ್ನೇ ಮುಂದುವರಿಸುವ ತನಕ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರುತಿ, ಮಾಜಿ ಪುರಸಭೆ ಅಧ್ಯಕ್ಷ ಪುಟ್ಟರಾಜು ಮಾಜಿ ತಾಲೂಕ್ ಪಂಚಾಯಿತಿ ಅಧ್ಯಕ್ಷ ಲಕ್ಕೂರು ಬಸವರಾಜು, ಕಾಂಗ್ರೆಸ್ ಮುಖಂಡ ಬಾಗೇವಾಳು ಮಂಜೇಗೌಡ, ಉನ್ನಿ ಕೊಪ್ಪಲು ಮಂಜೇಗೌಡ ಬೀಚನಹಳ್ಳಿ ಬಸವರಾಜು ಮಾತನಾಡಿದರು.