ಶ್ರೀ ಕ್ಷೇತ್ರ ಬೂಕನ ಬೆಟ್ಟದ ಶ್ರೀ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಉತ್ತಮ ರಾಸುಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಬಹುಮಾನ ವಿತರಿಸಿದರು.
ಹಿರೀಸಾವೆ: ದೇಶಿಯ ತಳಿಗಳ ರಾಸು ಸಂತಾನೋತ್ಪತ್ತಿಯೊಂದಿಗೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಬೂಕನಬೆಟ್ಟದ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಹಳ್ಳಿಕಾರ್ ತಳಿಯ ಎತ್ತುಗಳಿಗೆ ಒಳ್ಳೆಯ ಬೇಡಿಕೆ ಇದೆ. ಮೊದಲೆಲ್ಲ ಕೃಷಿ ಚಟುವಟಿಕೆಯಲ್ಲಿ ಜಾನುವಾರುಗಳ ಬಳಕೆ ಹೆಚ್ಚಾಗಿತ್ತು. ಆಧುನಿಕ ಯಂತ್ರೋಪಕರಣಗಳು ಬಳಕೆಗೆ ಬಂದ ಮೇಲೆ ನಾಟಿ ಅಥವಾ ದೇಶಿಯ ತಳಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೂಕನಬೆಟ್ಟದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ ಬೆಟ್ಟದ ಮೇಲಿನ ಕಾಂಪೌಂಡ್ ನಿರ್ಮಾಣ, ಬೆಟ್ಟದ ರಸ್ತೆಗೆ ಕಾಂಕ್ರೀಟ್, ಹಿರೀಸಾವೆ, ಸೋರೆಕಾಯಿಪುರ, ದಿಡ್ಡಮ್ಮನ ಗುಡಿ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ-ಜಾನುವಾರುಗಳು ಆಗಮಿಸುವುದರಿಂದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಶೆಟ್ಟಿಹಳ್ಳಿ ಡೈರಿಯಿಂದ 25 ಸಾವಿರ ಲೀಟರ್ ಸಾಮರ್ಥ್ಯವಿರುವ ಟ್ಯಾಂಕರ್ ಮೂಲಕ ಪ್ರತಿದಿನ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.
ಬೂಕನಬೆಟ್ಟದ ತಪ್ಪಲಲ್ಲಿ ಪೂರ್ವಕಾಲದಿಂದ ಸಂತೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಿಂದ ನಿಂತು ಹೋಗಿತ್ತು. ಕಳೆದ ವರ್ಷದಿಂದ ಹೊಸದಾಗಿ ಸಂತೆ ಪ್ರಾರಂಭಿಸಲಾಗಿದೆ. ಎರಡು ಪ್ರಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಆಯ್ಕೆ ಮಾಡಿರುವ 18 ಜತೆ ರಾಸುಗಳಿಗೆ ಬಹುಮಾನವಾಗಿ 1.2 ಗ್ರಾಂ ಚಿನ್ನ ಹಾಗೂ 5 ಸಾವಿರ ರೂ. ನಗದು ಬಹುಮಾನವನ್ನು ಶಾಸಕ ಸಿ.ಎನ್.ಬಾಲಕೃಷ್ಣ ವಿತರಿಸಿದರು. ಗ್ರಾಮೀಣ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಜತೆಗೆ 5 ಜೋಡಿ ಎತ್ತುಗಳಿಗೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ ಗೋಪಾಲಸ್ವಾಮಿ ಅವರ ವತಿಯಿಂದ ತಲಾ 3 ಸಾವಿರ ರೂ. ನಗದು ಪ್ರೋತ್ಸಾಹಧನ ನೀಡಲಾಯಿತು.
ತಹಸೀಲ್ದಾರ್ ಶಂಕರಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಸ್.ಜಿ. ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಮಂಜುನಾಥ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ.ದೊರೆಸ್ವಾಮಿ, ಉದ್ಯಮಿ ಅಣತಿ ಯೋಗೇಶ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಅಧಿಕಾರಿ ಜ್ಯೋತಿ, ಡಿವೈಎಸ್ಪಿ ಕುಮಾರ್, ಪಿಎಸ್‌ಐ ಮಂಜುನಾಥ್, ತಾಲೂಕು ಆರೋಗ್ಯ ಸಮಿತಿ ಸದಸ್ಯ ಸಾಮಿಲ್ ರಘು, ಸೀಗೆಕೊಪ್ಪಲು ಮಂಜಣ್ಣ, ಉಪ ತಹಸಿಲ್ದಾರ್ ರವಿ, ರಾಜಸ್ವ ನಿರೀಕ್ಷಕ ಯೋಗೇಶ್, ದೇವಸ್ಥಾನದ ಪಾರುಪತ್ತೆ ದಾರ ರಂಗರಾಜು ಇತರರು ಇದ್ದರು.