ಅರಕಲಗೂಡಿನಲ್ಲಿ ಸೋಮವಾರ ಆಯೋಜಿಸಿದ್ದ ಪಪಂ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ. ಮಂಜು ಮಾತನಾಡಿದರು. ಕೆ.ಸಿ.ಸೌಮ್ಯ, ನಾಗೇಂದ್ರ ಕುಮಾರ್ ಇದ್ದರು.
ಅರಕಲಗೂಡು: ಪಟ್ಟಣದಲ್ಲಿ ಸರ್ಕಾರಿ ಆಸ್ತಿ ಹಾಗೂ ಪಾರ್ಕ್‌ಗಳು ಒತ್ತುವರಿಯಾಗಿ ಅಕ್ರಮವಾಗಿ ಕಟ್ಟಡಗಳು ತಲೆ ಎತ್ತಿ ಪಟ್ಟಣ ಪಂಚಾಯಿತಿಗೆ ಆದಾಯ ಕಡಿಮೆಯಾಗುತ್ತಿದೆ. ಆದಾಯದ ಮೂಲ ಹೆಚ್ಚಿಸಿಕೊಳ್ಳುವಲ್ಲಿ ಪಪಂ ಆಡಳಿತ ವಿಫಲವಾಗುತ್ತಿದೆ ಎಂದು ಸೋಮವಾರ ಆಯೋಜಿಸಿದ್ದ ಪಪಂ ಪೂರ್ವಭಾವಿ ಬಜೆಟ್ ಸಭೆಯಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.
ಪಪಂ ಸಭಾಂಗಣದಲ್ಲಿ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ಕೆ.ಸಿ.ಸೌಮ್ಯ ಮಾತನಾಡಿ, ಪಪಂ ಆದಾಯ ಕಡಿಮೆಯಾಗುತ್ತಿರುವ ಕುರಿತು ಅಸಮಾಧಾನ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಟ್ಟಣ ನಿವಾಸಿ ಶಂಕರ್ ಮಾತನಾಡಿ, ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳಿಗೆ ಕಂದಾಯ ನಿಗದಿಪಡಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹಳೇ ಬಸ್ ನಿಲ್ದಾಣ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಶೆಡ್ ನಿರ್ಮಿಸಿ ಬಾಡಿಗೆಗೆ ಕೊಡಲಾಗಿದೆ. ಇದರಿಂದ ಪಪಂ ಆದಾಯ ಖೋತ ಆಗುತ್ತಿದೆ. ಈ ಜಾಗವನ್ನು ಪಪಂ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಬಸವನಗುಡಿ ನಿವಾಸಿ ಗಣೇಶ್ ಶೆಟ್ಟಿ ಮಾತನಾಡಿ, ಬೈಪಾಸ್ ರಸ್ತೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳು ತಲೆಎತ್ತಿ ಕ್ರಮ ಚಟುವಟಿಕೆಗೆ ಎಡೆಮಾಡಿ ಕೊಡಲಾಗಿದೆ. ಗ್ರಾಪಂ ವ್ಯಾಪ್ತಿಗೆ ಸೇರಿದ ಜಾಗಕ್ಕೆ ಪಪಂ ಮೂಲಸೌಕರ್ಯ ಒದಗಿಸುತ್ತಿದೆ. ಇದರಿಂದ ಪಟ್ಟಣದ ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ. ಇದಕ್ಕೆ ತಡೆ ಬೀಳಬೇಕು ಆಗ್ರಹಿಸಿದರು.
ಬಾಣದಹಳ್ಳಿ ಗಣೇಶ್, ನಿವಾಸಿ ಬಸವರಾಜು ಮಾತನಾಡಿ, ಪಟ್ಟಣದಲ್ಲಿ ಮಳಿಗೆ ಬಿಡ್ ಮಾಡಿದವರಿಗೆ ಹಣ ವಾಪಸ್ ಕೊಡಿ. ಇಲ್ಲವಾದರೆ ಮಳೆಗೆ ಬಾಡಿಗೆಗೆ ಕೊಡಿ, ಬಡವರನ್ನು ಬೀದಿಗೆ ತಳ್ಳುವುದು ಎಷ್ಟರಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿವಾಸಿ ಸುಬ್ಬರಾವ್ ಮಾತನಾಡಿ, ವಾಣಿಜ್ಯ ಮಳಿಗೆಗಳಿಂದ ಸರಿಯಾಗಿ ಆದಾಯದ ಮೂಲವಾಗುತ್ತಿಲ್ಲ. ಈ ಬಗ್ಗೆ ಆಡಳಿತಾತ್ಮಕವಾಗಿ ಸುಧಾರಣೆಯಾಗಬೇಕು ಎಂದು ಮನವಿ ಮಾಡಿದರು.
ಪಪಂ ಮಾಜಿ ಉಪಾಧ್ಯಕ್ಷೆ ರಶ್ಮಿ ಮಾತನಾಡಿ, ಸಂತೆಮಾಳದಲ್ಲಿ ವ್ಯಾಪಾರ ಮಾಡಲು ಶೆಡ್ ವ್ಯವಸ್ಥೆ ಇದ್ದರೂ ಪುಟ್‌ಪಾತ್ ಆವರಿಸಿಕೊಂಡು ಗಲೀಜು ಮಾಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಒಳ ಕ್ರೀಡಾಂಗಣ ಮಾಡಬೇಕು. ಬಡವರಿಗೆ ನಿವೇಶನ ವಿತರಿಸಬೇಕು ಎಂದರು.
ಸಾಲಗೇರಿ ನಿವಾಸಿ ರವಿಕುಮಾರ್ ಮಾತನಾಡಿ, ಪಟ್ಟಣ ಹೊರಭಾಗದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ. ಮಂಡಿಕೇರಿ, ಹಂಪಾಪುರದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಬಿಇಒ ಕ್ರಮ ವಹಿಸಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷ ಮಂಜುಶೆಟ್ಟಿಗೌಡ ಮಾತನಾಡಿ, ಕಸ ವಿಲೇರಿವಾರಿ ಸರಿಯಾಗಿ ಆಗಬೇಕು. ಹೌಸಿಂಗ್ ಬೋರ್ಡ್ ಪಾರ್ಕ್ ಅಭಿವೃದ್ಧಿಪಡಿಸಬೇಕು. ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಗಳ ಎರಡು ಕಡೆ ವಿಭಜಕಗಳಿಗೆ ಬಣ್ಣ ಹಾಕಬೇಕು. ಕೆಲ ನಿವಾಸಿಗಳಿಗೆ ವಾಸಿಸುವ ಮನೆಗಳಿಗೆ ಹಕ್ಕಪತ್ರ ಇಲ್ಲವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ನಿವಾಸಿ ವಿರೂಪಾಕ್ಷ ಮಾತನಾಡಿ, ಮುಖ್ಯ ರಸ್ತೆಯಿಂದ ಸಂತೆಮಾಳ ರಸ್ತೆ ತನಕ ಮಳೆ ಬಂದರೆ ಗಲೀಜು ನೀರು ನುಗ್ಗುತ್ತಿದೆ. ಪಪಂಗೆ ಹಲವಾರು ಬಾರಿ ಮನವಿ ಮಾಡಿದರೂ ಚರಂಡಿ ವ್ಯವಸ್ಥೆ ಮಾಡಿಲ್ಲ. ಈ ಅವ್ಯವಸ್ಥೆ ಸರಿಪಡಿಸಿ ಮಳಿಗೆದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ನಿವಾಸಿ ಮುತಾಹೀರ್ ಪಾಷಾ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳದಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಬೇಕು. ಪಟ್ಟಣದಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ, ಗುತ್ತಿಗೆದಾರನನ್ನು ಕೇಳಿದರೆ ಗುತ್ತಿಗೆ ಪಡೆದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾನೆ. ಮಸೀದಿ ರಸ್ತೆ, ಬಡಗರ ಬೀದಿಯಲ್ಲೂ ಬೀದಿ ದೀಪಗಳು ಉರಿಯದೆ ಪಟ್ಟಣ ಕತ್ತಲಲ್ಲಿ ಮುಳುಗಿದೆ, ಬೀದಿ ದೀಪಗಳ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಡಿ.ಕೃಷ್ಣಮೂರ್ತಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಘಟಕದ ಕಾಂಪೌಂಡ್ ಒಡೆದಿದ್ದು ಸರಿಪಡಿಸಬೇಕು. ಪಟ್ಟಣ ವ್ಯಾಪ್ತಿಯ ಹೊನ್ನವಳ್ಳಿ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ದಸಂಸ ಮುಖಂಡ ಗಣೇಶ್ ವೇಲಾಪುರಿ ಮಾತನಾಡಿ, ಪಟ್ಟಣದ ಕಸ ಸುರಿಯಲು ದೇವರಹಳ್ಳಿ ಬಳಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಅವೈಜ್ಞಾನಿಕವಾಗಿದ್ದು, ಅನಾರೋಗ್ಯದ ತಾಣವಾಗಿದೆ. ಅಲ್ಲಲ್ಲಿ ತ್ಯಾಜ್ಯ ಹರಡಿದ್ದು ಅಲ್ಲಿನ ನಿವಾಸಿಗಳು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕಸ ವಿಲೇವಾರಿ ಘಟಕ ಸ್ಥಳಾಂತರಿಬೇಕು. ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದ್ದು, ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಅಡ್ಡಾಡುವ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದರು.
ಸಿಡಿಪಿಒ ವೆಂಕಟೇಶ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.
ನಿವಾಸಿ ರಘು ಮಾತನಾಡಿ, ತಾಲೂಕು ಕ್ರೀಡಾಂಗಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಲು ಪಂಚಾಯಿತಿ ನಿರ್ಣಯ ಕೈಗೊಂಡಿದ್ದು, ಇದು ಅನುಷ್ಠಾನವಾಗಬೇಕು ಎಂದರು. ಪಟ್ಟಣದ ಕುವೆಂಪು ಉದ್ಯಾನವನದಲ್ಲಿ ಸ್ವಚ್ಛತೆ ಕಾಪಾಡಿ ಕುವೆಂಪು ಪುತ್ಥಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳನ್ನು ಸರ್ವೇ ಮಾಡಿದ್ದು, ಪುಡ್‌ಕೋರ್ಟ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಾಣಿಜ್ಯ ಮಳಿಗೆಗಳನ್ನು ಕಾನೂನಾತ್ಮಕವಾಗಿ ಹರಾಜು ಮಾಡಲಾಗಿದ್ದು, ಕೆಲವರು ಹರಾಜು ಪ್ರಕ್ರಿಯೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಅಕ್ರಮವಾಗಿ ಕಟ್ಟಡ, ಪಾರ್ಕ್ ಜಾಗ ಒತ್ತುವರಿಯಾಗಿದ್ದರೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಕುವೆಂಪು ಪಾರ್ಕ್ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ನಿವೇಶನ ಹಂಚಿಕೆಗೆ ಶಾಸಕರನ್ನು ಸಂಪರ್ಕಿಸಿ ಕ್ರಮ ವಹಿಸಲಾಗುವುದು. ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಪ್ರಗತಿ ಹಂತದಲ್ಲಿದೆ. ವಾಣಿಜ್ಯ ಮಳಿಗೆದಾರರು ಬಾಡಿಗೆ ಹಾಗೂ ನೀರಿನ ಕರ ಪಾವತಿ ಹಿನ್ನಡೆಯಾಗಿದ್ದು, ನಿಗದಿತ ಅವಧಿಯಲ್ಲಿ ಪಾವತಿಸಬೇಕು. ಎಲ್ಲೆಂದರಲ್ಲಿ ಕಸ ಬೀಸಾಡುವವರ ಬಗ್ಗೆ ಮಾಹಿತಿ ನೀಡಿದರೆ ದಂಡ ವಿಧಿಸಲಾಗುವುದು ಎಂದರು.
ಪಪಂ ಆಡಳಿತಾಧಿಕಾರಿ ಕೆ.ಸಿ.ಸೌಮ್ಯಾ ಮಾತನಾಡಿ, ಪಟ್ಟಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ವಲಸೆದಾರರಿಗೆ ನಿರ್ಮಿಸಿಕೊಟ್ಟಿರುವ ಶೆಡ್‌ಗಳ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಶಾಸಕ ಎ. ಮಂಜು ಮಾತನಾಡಿ, ಅಭಿವೃದ್ಧಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಒಂದು ವರ್ಷದೊಳಗೆ ಯುಜಿಡಿ ಕಾಮಗಾರಿ ಮುಗಿಯಲಿದೆ. ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.