ಹೊಳೆನರಸೀಪುರ ಪಟ್ಟಣದ ಕಾರ್ಮಿಕ ಇಲಾಖೆಯ ಮುಂಭಾಗ ದ್ವಿಚಕ್ರ ವಾಹನಗಳ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆಯಾಗಿರುವುದು.
ಹೊಳೆನರಸೀಪುರ: ತಾಲೂಕಿನ ಕಾರ್ಮಿಕ ಇಲಾಖೆ ಅಧಿಕಾರಿಗಳ ಯಡವಟ್ಟು ಕೆಲಸದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಜಮಾವಣೆಗೊಂಡು ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು.
ಬುಧವಾರ ಪಟ್ಟಣದ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆನರಾ ಬ್ಯಾಂಕ್ ಪಕ್ಕದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ತಾಲೂಕಿನ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಉಚಿತವಾಗಿ ಸೇಫ್ಟಿ ಕಿಟ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿರುವ ಕೂಲಿ ಕಾರ್ಮಿಕರು ಕಿಟ್ ಪಡೆದುಕೊಳ್ಳಲು ಏಕಕಾಲದಲ್ಲೇ ಕಚೇರಿಗೆ ಆಗಮಿಸಿದ್ದರು. ಪರಿಣಾಮ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ದಟ್ಟಣೆ ಹೆಚ್ಚಾಯಿತು. ಜತೆಗೆ ರಸ್ತೆ ಬದಿಯಲ್ಲೇ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಲಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕಳೆದ ವರ್ಷ ಇದೇ ರೀತಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿ ಬೈಕ್ ತೆಗೆದುಕೊಳ್ಳುವ ವೇಳೆ ಬಸ್‌ಗೆ ಸಿಲುಕಿ ಶಿಕ್ಷಕರೊಬ್ಬರು ಸಾವಿಗೀಡಾಗಿದ್ದರು. ಇದೀಗ ಮತ್ತೆ ಅದೇ ಸ್ಥಳದಲ್ಲಿ ವಾಹನ ದಟ್ಟನೆ ಹೆಚ್ಚಾಗಿರುವುದು ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ ತಂದಿಟ್ಟಿದೆ.
ಕಾರ್ಮಿಕ ಇಲಾಖೆಯ ಅಧಿಕಾರಿ ಮುನ್ನೆಚ್ಚರಿಕೆ ಕ್ರಮ ವಹಿಸದೆ ತಾಲೂಕಿನ ಎಲ್ಲ ಕಾರ್ಮಿಕರನ್ನು ಒಂದೇ ದಿನ ಕಚೇರಿಯ ಬಳಿ ಕರೆಸಿಕೊಂಡು ಸಂಚಾರ ಸಮಸ್ಯೆ ಉಂಟು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಕಿಟ್ಟು ವಿತರಿಸುವ ಕಾರ್ಯಕ್ರಮವನ್ನು ತಾಲೂಕು ಕಚೇರಿ ಸಮೀಪದಲ್ಲಿ ಅಥವಾ ಮೈದಾನದಲ್ಲಿ ಆಯೋಜಿಸಿದರೆ ಈ ಸಮಸ್ಯೆ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.