ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಟ್ರಸ್ಟ್‌ನಿಂದ ಹೊರ ತಂದಿರುವ 2026ರ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಯಮಸಂಧಿ ಪಾಪಣ್ಣ ಇತರರು. 
ಹಾಸನ

2ರಿಂದ ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕೋತ್ಸವ

ಲೋಕೇಶ್ ಮನು. ಡಿ
ಬೇಲೂರು: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜ.2ರಿಂದ ಜ.4ರ ವರೆಗೆ 8ನೇ ವರ್ಷದ ವಾರ್ಷಿಕೋತ್ಸವ ಆಯೋಜಿಸಲಾಗಿದ್ದು, ಹೆಚ್ಚಿನ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಯಮಸಂಧಿ ಪಾಪಣ್ಣ ಮಾಹಿತಿ ನೀಡಿದರು.
ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲಿ 2026ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀವಿಶ್ವವಸು ನಾಮ ಸಂವತ್ಸರದ ಪುಷ್ಯ ಮಾಸದ ಜ.2ರಂದು ಬೆಳಗ್ಗೆ 10 ಗಂಟೆಗೆ ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇಗುಲದಲ್ಲಿ ತಿರುವಾಭರಣ ಪೂಜೆ ನೆರವೇಸಿದ ನಂತರ ಶ್ರೀ ಅಯ್ಯಪ್ಪಸ್ವಾಮಿ ದೇಗುಲದವರೆಗೂ ಚಂಡೆ ಮೇಳದೊಂದಿಗೆ ದೇವರ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.
ಜ.3ರಂದು ಬೆಳಗ್ಗೆ 7 ಗಂಟೆಗೆ ಗಣಪತಿ, ಸುಬ್ರಮಣ್ಯ, ಅಯ್ಯಪ್ಪಸ್ವಾಮಿ, ಮಾಳಿಗೆ ಪುರತಮ್ಮ ಹಾಗೂ ಕ್ಷೇತ್ರ ಪಾಲಕರಿಗೆ ಪಂಚಾಮೃತ ಅಭಿಷೇಕ, ಹೋಮ, ಪೂರ್ಣಾಹುತಿ ನೆರವೇರಿಸಿ ನೆರದ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಗುವುದು. ಅದೇ ದಿನ ಸಂಜೆ 4 ಗಂಟೆಗೆ ಕೇರಳದ ಹರಸಾಂತ ವಯನಾಡು ಚಂಡೆ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ.
ಜ.4ರಂದು ಬೆಳಗ್ಗೆ ದೇವರಿಗೆ ನಿತ್ಯಪೂಜೆ ನೆರವೇರಲಿದ್ದು, ಸಂಜೆ 6 ಗಂಟೆಗೆ ಶ್ರೀ ಡಾ.ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರ ಸಾನ್ನಿಧ್ಯದಲ್ಲಿ ಐತಿಹಾಸಿಕ ಪಡಿಪೂಜೆ ನೆರವೇರಲಿದೆ. ನಂತರದಲ್ಲಿ ಪುಷ್ಪಾಭಿಷೇಕ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗಿಸಲಾಗುವುದು. ಪಡಿಪೂಜೆಯನ್ನು ವೇ.ಬ್ರ.ರಾಮಚಂದ್ರ ಅವರು ನಡೆಸಿ ಕೊಡಲಿದ್ದು, ಶ್ರೀ ಅಯ್ಯಪ್ಪಸ್ವಾಮಿ ದೇಗುಲದ ಗುರುಸ್ವಾಮಿ ಬಿ.ಎನ್.ದೇವರಾಜು(ದೇವಿಸ್ವಾಮಿ), ಪ್ರಧಾನ ಅರ್ಚಕ ಬಿ.ಎಸ್.ಪ್ರಕಾಶ್, ನಿತ್ಯಪೂಜಾ ಅರ್ಚಕ ಸೋಮಶೇಖರ್ ದೇವರ ಸೇವೆ ನಡೆಸಲಿದ್ದಾರೆ ಎಂದರು.
ದೇಗುಲದ ದೇವಿಸ್ವಾಮಿ ಮಾತನಾಡಿ, ಶ್ರೀ ಅಯ್ಯಪ್ಪಸ್ವಾಮಿಯ ಆರಾಧನೆ ಶ್ರದ್ಧೆ, ಶಿಸ್ತಿನ ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ದಾರಿಯಾಗಿದೆ. ದೇವರ ವ್ರತಾಚರಣೆ, ಪಡಿಪೂಜೆ ಭಕ್ತರಲ್ಲಿ ಆತ್ಮಶುದ್ಧಿ, ಸಹನೆ ಮತ್ತು ಸಮಾನತೆಯ ಭಾವನೆ ಬೆಳೆಸುತ್ತವೆ. ದೇವಾಲಯದ ಚಟುವಟಿಕೆಗಳಲ್ಲಿ ಭಕ್ತರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಶಿಸ್ತು ಹಾಗೂ ಭಕ್ತಿಭಾವದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಅಧ್ಯಕ್ಷ ವೈ.ಎನ್.ಕೃಷ್ಣೇಗೌಡ, ಖಜಾಂಚಿ ದೇವರಾಜು, ಗೌರವಾಧ್ಯಕ್ಷ ಸಂತೋಷ್, ಕಾರ್ಯಾದ್ಯಕ್ಷ ಮೋಹನ್ ಕುಮಾರ್, ದಯಾನಂದ್, ಧನಪಾಲ್ ಇತರರಿದ್ದರು.