ಅರಕಲಗೂಡಿನ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿಸದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ತಯಾರಿಸಿ ಉತ್ಸಾಹದಿಂದ ಮಾರಾಟ ಮಾಡಿದರು. 
ಹಾಸನ

ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಅತ್ಯವಶ್ಯ

ಲೋಕೇಶ್ ಮನು. ಡಿ
ಅರಕಲಗೂಡು: ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಅತ್ಯವಶ್ಯಕ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಆಧುನಿಕ ಪ್ರಪಂಚದಲ್ಲಿ ವ್ಯವಹಾರಿಕ ಜ್ಞಾನ ಮುಖ್ಯವಾಗಿದ್ದು, ವಿದ್ಯಾರ್ಥಿ ದಿಸೆಯಲ್ಲೇ ಕಲಿಯಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕಕ ಕೌಶಲ ಬೆಳೆಸುವ ಉದ್ದೇಶದಿಂದ ಆಹಾರ ಮೇಳ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಪಿ.ನವೀನ್ ಉಲಿವಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 14 ಸ್ಟಾಲ್‌ಗಳನ್ನು ತೆರದಿದ್ದ ವಿದ್ಯಾರ್ಥಿಗಳ ತಂಡ ತಾವೇ ತಯಾರಿಸಿ ತಂದ ಹೈದರಾಬಾದ್ ಬಿರಿಯಾನಿ, ಶಾವಿಗೆ, ಕಡುಬು, ಕೋಳಿ ಸಾರು , ನಿಪ್ಪಟ್ಟು, ಸಿಹಿ ತಿನಿಸುಗಳು, ಪಾನಿಪೂರಿ,ಬರ್ಗರ್, ಪಾವ್‌ಬಾಜಿ, ಬಜ್ಜಿ, ಐಸ್ ಕ್ರೀಂ, ಕಬಾಬ್, ಫಿಶ್ ಫ್ರೈ, ಪರೋಟ, ಜಾಮೂನು ಸೇರಿದಂತೆ ಹತ್ತು ಹಲವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯ ಹಾಗೂ ಚಾಟ್ಸ್‌ಗಳನ್ನು ಮಾರಾಟ ಮಾಡಿದರು.
ಪಾಲಕರು, ಸಹವಿದ್ಯಾರ್ಥಿಗಳು ತಿಂಡಿ, ತಿನಿಸುಗಳ ಖರೀದಿಸಿ ಪ್ರೋತ್ಸಾಹಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿನಿಯರು ಸೀರೆ, ವಿದ್ಯಾರ್ಥಿಗಳು ಪಂಚೆ ಶಲ್ಯ ಧರಿಸಿನೊಂದಿಗೆ ಆಹಾರ ಮೇಳಕ್ಕೆ ಮೆರುಗು ನೀಡಿದರು. 50 ಸಾವಿರ ರೂ. ಬಂಡವಾಳ ತೊಡಗಿಸಿ 70 ಸಾವಿರ ರೂ. ವಹಿವಾಟು ನಡೆಸುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯವಹಾರ ಕೌಶಲ ಮೆರೆದರು. ಹೆಚ್ಚಿನ ವಹಿವಾಟು ನಡೆಸಿದ ಮೂರು ತಂಡಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಉಪನ್ಯಾಸಕರಾದ ಕೃಷ್ಣಮೂರ್ತಿ, ಡಿ.ಮಧು, ಪ್ರಜ್ವಲ್, ಉದಯ್ ಕುಮಾರ್, ನಂದೀಶ್, ರಾಕೇಶ್, ಅರ್ಪಿತಾ, ರಿಯಾನಾ, ರೇಷ್ಮಾ, ಅನುಶ್ರೀ, ಭೂಮಿಕಾ , ಚಂದ್ರಶೇಖರ್ ಇದ್ದರು.