ತಾಲೂಕಿನ ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ದೇವಾಲಯದಲ್ಲಿ ಯೇಸುಕ್ರಿಸ್ತರ ಜನ್ಮ ವೃತ್ತಾಂತ ಸಾರುವ ಕೃತಕವಾಗಿ ರೂಪಿಸಿದ ಗೋದಲಿ ಎಲ್ಲರ ಗಮನ ಸೆಳೆಯಿತು.
ಚನ್ನರಾಯಪಟ್ಟಣ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಯೇಸುಕ್ರಿಸ್ತನ ಜನ್ಮದಿನ ನಿಮಿತ್ತ ಗುರುವಾರ ಪಟ್ಟಣದಲ್ಲಿ ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಿಸಲಾಯಿತು.
ತಾಲೂಕಿನ ಹಲವು ಚರ್ಚ್‌ಗಳಲ್ಲಿ ಕ್ಯಾಂಡಲ್‌ಗಳ ವಿಹಂಗಮ ನೋಟ ಕಣ್ಮನ ಸೆಳೆಯಿತು. ತಾಲೂಕಿನ ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚ್ ಹಾಗೂ ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಕೇಕ್ ವಿತರಿಸುವ ಜತೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಮಾಜದವರು ಸಂಭ್ರಮಪಟ್ಟರು. ಇನ್ನು ಚರ್ಚ್‌ಗಳು ಕೂಡ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಕ್ರಿಸ್‌ಮಸ್ ಟ್ರೀ, ಬಣ್ಣ ಬಣ್ಣದ ಸ್ಟಾರ್ಸ್‌ಗಳು, ಕೃತಕ ಗೋದಲಿಗಳು, ಬಗೆ ಬಗೆಯ ಗ್ರೀಟಿಂಗ್ ಕಾರ್ಡ್‌ಗಳು, ವಿದ್ಯುತ್ ಅಲಂಕಾರಿಕ ಸಾಮಗ್ರಿ ಹಾಗೂ ಬಲೂನ್‌ಗಳು ಪಟ್ಟಣದ ಕ್ರೈಸ್ತರ ಮನೆಗಳಲ್ಲಿ ರಾರಾಜಿಸುತ್ತಿದ್ದವು. ಕೇಕ್ ಹಾಗೂ ಚಾಕೋಲೆಟ್ ಸವಿದು ಜನರು ಖುಷಿ ಪಟ್ಟರು. ಕ್ರೈಸ್ತರ ಮನೆಮನೆಗಳ ಎದುರು ಮಿನುಗುವ ಹಣತೆಗಳು, ಮೇಣದ ಬತ್ತಿಗಳು, ರಾರಾಜಿಸುವ ಗೂಡು ದೀಪಗಳು, ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷದಲ್ಲಿ ಝಗಮಗಿಸುವ ಬಣ್ಣಬಣ್ಣದ ದೀಪಗಳು ಆಕರ್ಷಣೀಯವಾಗಿದ್ದವು. ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತರ ಜನ್ಮ ವೃತ್ತಾಂತ ಸಾರುವ ಕೃತಕವಾಗಿ ರೂಪಿಸಿದ ಗೋದಲಿ ಎಲ್ಲರ ಗಮನ ಸೆಳೆಯಿತು. ಬುಧವಾರ ಮಧ್ಯರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಗಳು ನಡೆದವು.
ತಾಲೂಕಿನ ಆಲ್ಫೋನ್ಸ್ ನಗರದ ಸಂತ ಅಲ್ಫೋನ್ಸರ ಚರ್ಚಿನಲ್ಲಿ ಬೈಬಲ್ ಪಠಣ ಕಾರ್ಯಕ್ರಮ ನಡೆಯಿತು. ಜೆ ಮೈಕಲ್ ಮರಿ ಜರೋಮ್ ಮಾಚಾಡೋ ಯೇಸುಕ್ರಿಸ್ತನ ಮಹಿಮೆ ಹಾಗೂ ಅವರ ಸಂದೇಶಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣು ಎಂಬ ಶಾಂತಿ ಮಂತ್ರವನ್ನು ಮರು ಮನನ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಚರ್ಚ್‌ನ ಫಾದರ್ ಜೆ ಮೈಕಲ್ ಮರಿ ಮಾತನಾಡಿ, ಇದು ಮಾನವೀಯತೆಯ ಹಬ್ಬ. ದೇವರು ಮನುಷ್ಯತ್ವದೊಂದಿಗೆ ದೈವತ್ವವನ್ನು ಹಂಚಿಕೊಂಡು ಪ್ರೀತಿ ಮತ್ತು ಶಾಂತಿಯ ಪರಿಪೂರ್ಣತೆಯನ್ನು ಇಡೀ ವಿಶ್ವಕ್ಕೆ ಕಲಿಸಿಕೊಟ್ಟ ಹಬ್ಬ ಎಂದರು.
ಗಾನವೃಂದದವರು ವಿಶೇಷ ಸಂಗೀತ ಪ್ರಸ್ತುತ ಪಡಿಸಿದರು. ಸಮುದಾಯದರು ಶುಭಾಶಯ ವಿನಿಮಯ ಮಾಡಿಕೊಂಡರು.