ಹೊಳೆನರಸೀಪುರದ ಸುಭಾಷ್ ವೃತ್ತದಲ್ಲಿ ಬೆಂಕಿಗೆ ಮೈ ಕಾಯಿಸಿಕೊಳ್ಳುತ್ತಿರುವುದು.
ಹೊಳೆನರಸೀಪುರ: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಕೆಲ ದಿನಗಳಿಂದ ಮೈಕೊರೆಯುವ ಚಳಿ ಇದ್ದು, ಜನರು ತತ್ತರಿಸಿ ಹೋಗುತ್ತಿದ್ದಾರೆ.
ಶೀತಗಾಳಿ, ಚಳಿ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಜತೆಗೆ ಚಳಿಯಿಂದಾಗಿ ಜನತೆ ಮುದುಡಿ ಹೋಗಿದ್ದು, ಬೆಳಗಿನ ಜಾವ ಸುಭಾಷ್ ವೃತ್ತ, ಎಪಿಎಂಸಿ ಮಾರುಕಟ್ಟೆ, ಬಸ್ ನಿಲ್ದಾಣದ ಹತ್ತಿರ ಹೀಗೆ ಎಲ್ಲೆಂದರಲ್ಲಿ ಹಾಳೆ, ರಟ್ಟಿಗೆ ಬೆಂಕಿ ಹಚ್ಚಿ ಬಿಸಿ ಕಾಯಿಸಿ ಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಮೈ ನಡುಗಿಸುವ ಹೆಚ್ಚಿನ ಚಳಿ ಇರುವುದರಿಂದ ಪ್ರತಿದಿನ ಬೆಳಗ್ಗೆ 5.30ರಿಂದ 6 ಗಂಟೆ ಸಮಯದಲ್ಲಿ ವಾಯುವಿಹಾರಕ್ಕೆಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ ಬಯಲು ರಂಗಮಂದಿರ, ಮಹಾರಾಜ ಪಾರ್ಕ್, ನದಿ ತೀರಿದ ವಾಕಿಂಗ್ ಪಾತ್, ಅರಕಲಗೂಡು ರಸ್ತೆ, ಮಲ್ಲಪ್ಪನಹಳ್ಳಿ ರಸ್ತೆ, ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಸೂರ್ಯನ ಆಗಮನದ ನಂತರವೇ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ. ದಿನಪತ್ರಿಕೆ ವಿತರಿಸುವವರು, ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ಅವುಗಳನ್ನು ಸರಬರಾಜು ಮಾಡುವ ರೈತರು, ಕೆಲವು ಉದ್ಯೋಗ ಮಾಡುವವರು, ಪುರಸಭೆ ಪೌರಕಾರ್ಮಿಕರು ಎಷ್ಟೇ ಚಳಿ, ಗಾಳಿ ಇದ್ದರೂ ಅನಿವಾರ್ಯವಾಗಿ ಈ ಮೈ ಕೊರೆಯುವ ಚಳಿಯಲ್ಲಿಯೇ ನಡುಗುತ್ತಲೇ ತಮ್ಮ ಕಾಯಕ ಮಾಡುವಂತಾಗಿದೆ. ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಬೆಳಗ್ಗೆ ಚಳಿಗೆ ನಡುಗುತ್ತಾ ಬರುತ್ತಿರುವುದನ್ನು ಕುಂಡುಬರುತ್ತಿದೆ. ಸಾರ್ವಜನಿಕರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬೆಳಗ್ಗೆ 10 ಗಂಟೆಯ ನಂತರ, ಸಂಜೆ 7ರ ಒಳಗೆ ಮುಗಿಸಿ ಮನೆ ಸೇರಿಕೊಳ್ಳುತ್ತಿದ್ದಾರೆ.