ತಾಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ನಾಗೇಶ್‌ಶೆಟ್ಟಿ ಹಾಗೂ ಉಪಾಧ್ಯಕ್ಷೆ ಗಾಯತ್ರಿ ಅವರನ್ನು ಅಭಿನಂದಿಸಲಾಯಿತು. 
ಹಾಸನ

ನಾಗೇಶ್‌ಶೆಟ್ಟಿ ಅಧ್ಯಕ್ಷ, ಗಾಯತ್ರಿ ಉಪಾಧ್ಯಕ್ಷೆ

ಲೋಕೇಶ್ ಮನು. ಡಿ
ಬೇಲೂರು: ತಾಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎನ್‌ಡಿಎ ಬೆಂಬಲಿತರಾದ ನಾಗೇಶ್‌ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಗಾಯತ್ರಿ ಉಪಾಧ್ಯಕ್ಷೆಯಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸದಸ್ಯರಿದ್ದು, ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಎನ್‌ಡಿಎ ಬೆಂಬಲಿತರು ಜಯಗಳಿಸಿದ್ದರು. ಶುಕ್ರವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಜೆಡಿಎಸ್ ಬಿಜೆಪಿ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್‌ಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಾಯತ್ರಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.
ಅರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಸಹಕಾರ ಕ್ಷೇತ್ರವು ರೈತರ ಪರವಾದ ಕ್ಷೇತ್ರವಾಗಿದೆ. ಇಲ್ಲಿವರೆಗೂ ಸಾಕಷ್ಟು ಸಾಲ ಸೌಲಭ್ಯಗಳನ್ನು ಎಲ್ಲ ಸಹಕಾರ ಕ್ಷೇತ್ರಗಳಿಗೂ ನೀಡಿದ್ದು, ಇತ್ತಿಚಿನ 10 ವರ್ಷಗಳ ಅವಧಿಯಲ್ಲಿ ತಾಲೂಕಿನ ಕಟ್ಟ ಕಡೆಯ ರೈತರಿಗೂ ಸಾಲ ನೀಡಿ ಅವರನ್ನು ಅರ್ಥಿಕವಾಗಿ ಮೇಲೆ ಬರುವಂತೆ ಅನುಕೂಲ ಕಲ್ಪಿಸಲಾಗುತ್ತಿದೆ. ರೈತರಿಗೆ ಪ್ರಮುಖವಾಗಿ ಹೈನುಗಾರಿಕೆ ಸೇರಿದಂತೆ ಇನ್ನಿತರ ಸೌಲಭ್ಯವನ್ನು ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದೇವೆ. ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಬೇಲೂರು ತಾಲೂಕಿನಲ್ಲಿ ಎರಡನೇ ಸ್ಥಾನದಲ್ಲಿ ಅರೇಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರ ಮುನ್ನಡೆಯುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಹಕಾರ ನೀಡಲು ಎಚ್‌ಡಿಸಿಸಿ ಬ್ಯಾಂಕ್ ನಿಮ್ಮ ಜತೆ ಇರುತ್ತದೆ. ಸಂಘದ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಿಸಲು ಹೆಚ್ಚಿನ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಘದಲ್ಲಿ ಯಾವುದೇ ಗೊಂದಲಕ್ಕೂ ಅವಕಾಶ ನೀಡದೆ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್‌ಶೆಟ್ಟಿ ಮಾತನಾಡಿ, ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುವ ನಿರ್ದೇಶಕರನ್ನು ಆಯ್ಕೆ ಮಾಡಿರುವ ಈ ಭಾಗದ ಮತದಾರರನ್ನು ಅಭಿನಂದಿಸುತ್ತೇನೆ. ಜತೆಗೆ ಎನ್‌ಡಿಎ ಮೈತ್ರಿ ಬೆಂಬಲಿತರನ್ನು ಆಯ್ಕೆ ಮಾಡುವ ಮೂಲಕ ಈ ಸಂಘವು ತಾಲೂಕಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಮುಂದೆ ಇದು ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲರ ಸಹಕಾರ ಮುಖ್ಯ ಎಂದು ಮನವಿ ಮಾಡಿದರು.
ನೂತನ ಅಧ್ಯಕ್ಷ ನಾಗೇಶ್‌ಶೆಟ್ಟಿ ಮಾತನಾಡಿ, ತಮ್ಮ ಗೆಲುವಿಗೆ ಸಹಕರಿಸಿದ ಎಲ್ಲ ಶೇರುದಾರರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ದೇಶಕರಾದ ತುಳಸೀದಾಸ್, ಚಂದ್ರಶೇಖರ್, ನಿಂಗರಾಜು, ಅನಂತರಾಜು, ಅಣ್ಣಪ್ಪ, ಸುಹಿಲ್ ರೆಹಮಾನ್, ಪುಟ್ಟರಾಜು, ಹೇಮರಾಜು, ಪದ್ಮಾ ಹಾಗೂ ಕಾರ್ಯದರ್ಶಿ ಚನ್ನಕೇಶವ ಇತರರಿದ್ದರು.