ಹಿರೀಸಾವೆ ಹೋಬಳಿ ಮೂಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೆಂಡ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಪರಿಕರ ಕೊಡುಗೆ ನೀಡಲಾಯಿತು. ವಿ.ಎಸ್.ಸದಾಶಿವ, ಶ್ರೀಕಾಂತ್ ಇದ್ದರು. 
ಹಾಸನ

ಸರ್ಕಾರಿ ಶಾಲೆಗಳ ಬಲವರ್ಧನೆ ಅಗತ್ಯ

ಲೋಕೇಶ್ ಮನು. ಡಿ
ಹಿರೀಸಾವೆ: ಸಂಘ-ಸಂಸ್ಥೆಗಳು ಹಾಗೂ ಉಳ್ಳವರು ಅಗತ್ಯ ಸೌಲಭ್ಯಗಳೊಂದಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಮೆಂಡ ಫೌಂಡೇಷನ್ ವ್ಯವಸ್ಥಾಪಕ ವಿ.ಎಸ್.ಸದಾಶಿವ ಹೇಳಿದರು.
ಹೋಬಳಿಯ ಮೂಕಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಮೆಂಡ ಫೌಂಡೇಷನ್ ಹಾಗೂ ಸೆಲ್ಕೋ ಸೊಲಾರ್ ಕಂಪನಿ ವತಿಯಿಂದ 1.20 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ಶಾಲೆಗೆ ಕೊಡುಗೆ ನೀಡಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಪರಿಕರಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಯ ಬಲವರ್ಧನೆ ಮಾಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಅನೇಕ ಸರ್ಕಾರಿ ಶಾಲೆಗಳಿಗೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಣಿ ಮಾತನಾಡಿ, ಹಾಜರಾತಿ ಕೊರತೆ ಸೇರಿದಂತೆ ಇತರ ಕಾರಣಗಳಿಂದ ನೂರಾರು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಹಿರಿಯ ವಿದ್ಯಾರ್ಥಿಗಳು ಸಂಘ ಸ್ಥಾಪನೆ ಮಾಡಿಕೊಂಡು ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಘಟನೆ ಮಾಡಬೇಕು ಎಂದರು.
ಶಿಕ್ಷಣಾಧಿಕಾರಿ ಎಚ್.ಎನ್. ದೀಪಾ, ಸಮನ್ವಯಧಿಕಾರಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್ ಹಾಗೂ ಸಿಆರ್‌ಪಿ ಮಂಜುನಾಥ್, ಮುಖ್ಯಶಿಕ್ಷಕ ಜೆ.ಎಚ್.ಶ್ರೀಕಾಂತ್, ಸಹಶಿಕ್ಷಕರಾದ ಕೆಂಪೇಗೌಡ, ಸೌಮ್ಯಾ, ಕುಮಾರ್, ರಮ್ಯಾ, ಮೆಂಡ ಫೌಂಡೇಶನ್ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರು ಇದ್ದರು.