ಅರಕಲಗೂಡಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮವನ್ನು ರಾಶಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು. ಡಾ.ವಿಜಯ್ ಅಂಗಡಿ, ಹೊಂಬೇಗೌಡ, ಭುವನೇಶ್, ಕೆ.ಸಿ.ಸೌಮ್ಯಾ, ಕೆ.ಜೆ.ಕವಿತಾ, ರಾಜೇಶ್, ಸೀತಾರಾಮ್ ಭಟ್, ದಿನೇಶ್, ಮಂಜೇಗೌಡ ಇತರರಿದ್ದರು. 
ಹಾಸನ

ಮಾರುಕಟ್ಟೆಯಲ್ಲಿ ಉತ್ಪನ್ನ ಮಾರಿದರೆ ಲಾಭ

ಅರಕಲಗೂಡು: ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸಿ ಮಾರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಲಾಭ ಕಂಡುಕೊಳ್ಳಬಹುದು ಎಂದು ಕೃಷಿ ತಜ್ಞ ಡಾ.ವಿಜಯ್ ಅಂಗಡಿ ಸಲಹೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ, ಕೃಷಿ ಸಂಬಂಧಿತ ಇಲಾಖೆಗಳು ಮತ್ತು ಕೃಷಿಕ ಸಮಾಜದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ದಿನಾಚರಣೆ ಕಾರ್ಯಕ್ರಮದಲಿ ಮಾತನಾಡಿ, ರೈತರು ಅಪಾರ ಶ್ರಮ, ಹಣ ವ್ಯಯಿಸಿ ಬೆಳೆ ಬೆಳೆಯುವುದು ಎಷ್ಟು ಮುಖ್ಯವೋ ಅದೇ ರೀತಿ ಆ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಕಲಿಯಬೇಕು ಎಂದರು.
ಜಮೀನನನ್ನು ಪಾಳು ಬಿಟ್ಟು ಕೃಷಿಯನ್ನು ಕಡೆಗಣಿಸದೆ ದುಡಿಮೆ ದೇವರೆಂದು ಭಾವಿಸಬೇಕು. ಮಣ್ಣಿನ ಫಲವತ್ತತೆ ಕಳೆದುಕೊಂಡರೆ ಮನೆತನ ಹಾಳಾದಂತೆ. ಜಾನುವಾರುಗಳನ್ನು ಸಾಕಿ ಜೀವಾಮೃತ, ಬೀಜಾಮೃತ ಮಾಡಬೇಕು. ಆದಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಹತ್ತಾರು ರೀತಿಯ ಮಿಶ್ರ ಬೆಳೆಗಳನ್ನು ಬೆಳೆದು ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸಿಕೊಳ್ಳಬೇಕು. ಸಮಯಕ್ಕೆ ಬೆಲೆ ಕೊಟ್ಟು ದುಡಿಮೆ ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ಅಕ್ಕಿಗಿಂತ ಹೆಚ್ಚಿನದಾಗಿ ರಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ರೈತ ಸಂಘದ ಜಿಲ್ಲಾ ವರಿಷ್ಠ ಕಣಗಾಲು ಮೂರ್ತಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನ ಸಮಸ್ಯೆಗಳನ್ನು ಕೇಳುವವರೇ ಇಲ್ಲದ ಸ್ಥಿತಿ ಬಂದಿದೆ. ಆಳುವ ಮೂರು ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಕೂಡ ರೈತನ ಸಮಸ್ಯೆ ಕುರಿತು ಧ್ವನಿ ಎತ್ತುತ್ತಿಲ್ಲ. ಹಲವು ಶಾಸಕರು ಮಿತಿಮೀರಿ ಆಸ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರೈತ ಸಂಘದವರು ಲೆಕ್ಕ ಕೇಳುವ ಧೈರ್ಯ ಮಾಡಬೇಕು. ವಿದೇಶದಿಂದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ನಿಲ್ಲಬೇಕು ಎಲ್ಲರಲ್ಲದೆ, ರೈತರ ಕಾರ್ಯಕ್ರಮದಲ್ಲಿ ಗೈರಾಗಿರುವ ಶಾಸಕರ ನಡೆ ಖಂಡನೀಯ ಎಂದು ಎ.ಮಂಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ಮಾತನಾಡಿ, ಭಾರತ ಮತ್ತು ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಈ ಒಪ್ಪಂದ ಜಾರಿಯಾದರೆ ಅನೇಕ ಕೃಷಿ ಉತ್ಪನ್ನಗಳನ್ನು ಸುಂಕರಹಿತವಾಗಿ ಆಮದು ಮಾಡಿಕೊಂಡರೆ ಸ್ವದೇಶಿ ಉತ್ಪನ್ನಗಳ ಬೆಲೆ ಕುಸಿದು ಇಲ್ಲಿಯ ರೈತರು ಬೆಲೆ ಇಲ್ಲದೆ ಮತ್ತಷ್ಟು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಈ ಒಪ್ಪಂದಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರು ಸಹಿ ಹಾಕಬಾರದು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೈತ ಸಂಘದ ಅಧ್ಯಕ್ಷ ಹೊಂಬೇಗೌಡ, ಕೃಷಿಕ ಸಮಾಜದ ಉಪಾಧ್ಯಕ ಬೇಲೂರೇಗೌಡ, ಮುಖಂಡರಾದ ನಿಂಗೇಗೌಡ, ಜಗದೀಶ್, ಮಂಜೇಗೌಡ, ದಿನೇಶ್, ತಮ್ಮೇಗೌಡ, ಕಮಲಮ್ಮ, ಚಂದ್ರಪ್ಪ, ಲಕ್ಷ್ಮಮ್ಮ, ಶಶಿಕಲಾ, ಚೌಡೇಗೌಡ, ನರಸೇಗೌಡ, ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ. ಕವಿತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಶ್ಮಿ, ರೇಷ್ಮೆ ಇಲಾಖೆ ಸಹಾಯ ನಿರ್ದೇಶಕ ಸೀತಾರಾಮ್ ಭಟ್ ಇತರರಿದ್ದರು.
ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಗ್ಯಾರಂಟಿ ರಾಮಣ್ಣ ರೈತ ಗೀತೆ ಹಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನ ಬಳಿ ರೈತರ ಜಾಥಾಕ್ಕೆ ಶಾಸಕ ಎ. ಮಂಜು ಚಾಲನೆ ನೀಡಿದರು.