ಚನ್ನರಾಯಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರಾಗಿ ರಾಶಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಪೂಜೆ ಸಲ್ಲಿಸಿದರು. ಅರಳಾಪುರ ಮಂಜೇಗೌಡ, ಸಿ.ಜಿ. ರವಿ, ಕೆ.ಮೋಹನ್ ಕುಮಾರ್ ಜಿ.ಎಸ್. ಶಂಕರಪ್ಪ ಹಡೇನಹಳ್ಳಿ ಲೋಕೇಶ್, ಗಿರೀಶ್ ಭಾಗವಹಿಸಿದ್ದರು.
ಚನ್ನರಾಯಪಟ್ಟಣ : ಕೆರೆಗಳನ್ನು ಸಂರಕ್ಷಿಸವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವುಗಳ ಉಳಿವು ಅಗತ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಗಳೇ ನೀರನ್ನು ರಕ್ಷಿಸುವ ಸಾಧನಗಳಾಗಿವೆ. ಅಂತರ್ಜಲವನ್ನು ವೃದ್ಧಿಸಲು ಹಾಗೂ ಆಯಾ ಪ್ರದೇಶದಲ್ಲಿ ಕೃಷಿ, ಕುಡಿಯುವ ನೀರಿನ ಪೂರೈಕೆಯಲ್ಲಿ ಕೆರೆಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಕೆರೆಗಳು ರೈತರು, ಹಳ್ಳಿಗಾಡಿನ ಜನರ, ಜಾನುವಾರುಗಳ ಜೀವನಾಡಿ. ಕೆರೆಗಳ ಹೂಳು ತೆಗೆದು, ಕೆರೆ ಏರಿ ಎತ್ತರಿಸಿ, ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ನೀರಿನ ಸಂಗ್ರಹವನ್ನು ಹೆಚ್ಚಿಸಬೇಕು ಕೆರೆಗಳ ಅಭಿವೃದ್ಧಿಯಿಂದ, ಅಂತರ್ಜಲ ಹೆಚ್ಚಾಗಿ, ಕುಡಿಯುವ ನೀರು, ವ್ಯವಸಾಯಕ್ಕೆ ಅನುಕೂಲವಾಗುತ್ತದೆ. ಇದು ವ್ಯವಸಾಯವನ್ನೇ ನಂಬಿರುವ ರೈತಾಪಿ ಜನರಿಗೆ ವರವಾಗಲಿದೆ ಎಂದರು.
ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ರೈತರು ಸಾಂಪ್ರದಾಯಿಕ ಬೆಳೆಗೆ ಜೋತು ಬೀಳದೆ ಮಿಶ್ರ ಬೆಳೆ ಬೇಸಾಯ ಪದ್ಧತಿಗೆ ಮುಂದಾಗಬೇಕು. ಇದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಹೇಳಿದರು.
ಪ್ರಗತಿಪರ ರೈತರಾದ ಸೋರೆಕಾಯಿಪುರದ ಬಿ.ಅಣ್ಣೇಗೌಡ, ನಾಗೇನಹಳ್ಳಿ ಯಶೋದಮ್ಮ, ಎಂ.ದಾಸಪುರದ ಜ್ಞಾನಪ್ರಕಾಶ್, ಆನೆಕೆರೆ ಎ.ಪಿ.ಸರ್ವೇಶ್, ಶ್ರವಣಬೆಳಗೊಳ ಬಿ.ಜಿ.ರವಿ,
ಅರಳಾಪುರ ಶೀಲಾ ಕಿರಣ್, ಸಮುದ್ರವಳ್ಳಿ ರಾಮಚಂದ್ರ, ಗೊಲ್ಲರಹೊಸಳ್ಳಿ ಶಂಕರೇಗೌಡ, ಬಳದರೆ ನಂಜೇಗೌಡ, ಬಸವನಪುರ ಬೋರೆಗೌಡ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಿವೃತ ಜಂಟಿ ಕೃಷಿ ನಿರ್ದೇಶಕ ಆರ್.ಜಿ.ಗೊಲ್ಲರ್ ಮಣ್ಣಿನ ಫಲವತ್ತತೆ, ಬೆಳೆ ರೋಗ ನಿಯಂತ್ರಣ ಹಾಗೂ ಇಳುವರಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ರೈತರ ಪಡೆಯೇ ನೆರೆದಿತ್ತು. ರೈತ ಸಂಸ್ಕೃತಿ ಬಿಂಬಿಸುವ ಸಾಕಷ್ಟು ಎತ್ತಿನಗಾಡಿಗಳು,ರಸ್ತೆಗಳಲ್ಲಿ ಸಾಗಿ ಜನರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹರಳಾಪುರ ಮಂಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ. ರವಿ, ರೈತ ಸಂಘದ ಮಹಿಳಾ ಅಧ್ಯಕ್ಷೆ ಪ್ರೇಮಾ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕೃಷಿಕ ಸಮಾಜದ ಅಧ್ಯಕ್ಷ ಉಮೇಶ್, ರಾಜ್ಯ ಪ್ರತಿನಿಧಿ ಶಿವೇಗೌಡ, ಮುಖಂಡರಾದ ರವಿಕುಮಾರ್, ಗಿರೀಶ್, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಯೋಗೀಶ್, ಪ್ರಸಾದ, ಮಧುಸೂದನ್, ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್ ಕುಮಾರ್, ಕೃಷಿ ಅಧಿಕಾರಿಗಳಾದ ಟಿ.ರಶ್ಮಿ, ದಿನೇಶ್, ಪಲ್ಲವಿ, ರಕ್ಷಿತ್ , ಪುಟ್ಟಬೈರಯ್ಯ ಕೃಷಿ ಇಲಾಖೆಯ ಸಿಬ್ಬಂದಿಗಳು, ರೈತಸಂಘದ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.