ಎಸ್‌ಎಸ್‌ಎಲ್‌ಸಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಉದ್ಘಾಟಿಸಿದರು. ಕೀರ್ತಿ ಕುಮಾರ್, ನವೀನ್, ಕುಮಾರ್, ನಾರಾಯಣ್ ಇದ್ದರು. 
ಹಾಸನ

ಭವಿಷ್ಯದ ಗುರಿ ಅರಿಯಲು ಮಾರ್ಗದರ್ಶನ ಅಗತ್ಯ

ಲೋಕೇಶ್ ಮನು. ಡಿ
ಬೇಲೂರು : ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಂತಕ್ಕೆ ಸಾಗುವ ಸಂದರ್ಭ ಮಾರ್ಗದರ್ಶನ, ಕಾರ್ಯಾಗಾರಗಳು ಭವಿಷ್ಯದ ಗುರಿಗಳನ್ನು ಸ್ಪಷ್ಟವಾಗಿ ಅರಿಯಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು.
ಪಟ್ಟಣ ಸಮೀಪದ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಹಂತಕ್ಕೆ ಸಾಗುವ ಸಂದರ್ಭದಲ್ಲಿ ಉತ್ತಮ ಮಾರ್ಗದರ್ಶನ ಇಂತಹ ಕಾರ್ಯಾಗಾರಗಳು ಅತ್ಯವಶ್ಯಕ. ಕೇವಲ ಅಂಕಗಳ ಹಿಂದೆ ಓಡುವುದಕ್ಕಿಂತ ಆತ್ಮವಿಶ್ವಾಸ ಬೆಳೆಸಿಕೊಂಡು ಕೌಶಲಾಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಯಾಗಿದ್ದಾಗಲೇ ಸಮಯ ನಿರ್ವಹಣೆ, ಪರೀಕ್ಷಾ ತಯಾರಿ, ವೃತ್ತಿ ಆಯ್ಕೆ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿ ಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಇಂತಹ ಉಪಯುಕ್ತ ಕಾರ್ಯಾಗಾರಗಳನ್ನು ವಿದ್ಯಾರ್ಥಿಗಳಿಗಾಗಿ ನಿರಂತರವಾಗಿ ಆಯೋಜಿಸುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ದಕ್ಷಿಣ ಕನ್ನಡದ ಯಾಕೂಬ್ ಎಸ್.ಕೊಯ್ಯರ್ ಮಾತನಾಡಿ, ಗಣಿತವೆಂದರೆ ಭಯ ಪಡುವ ವಿಷಯವಲ್ಲ, ಅದು ತಾರ್ಕಿಕ ಚಿಂತನೆ ಮತ್ತು ಸಮಸ್ಯೆಗೆ ಪರಿಹಾರ ಕೌಶಲವನ್ನು ಬೆಳೆಸುವ ಅತ್ಯಂತ ಉಪಯುಕ್ತ ವಿಷಯ. ನಮ್ಮ ದಿನನಿತ್ಯದ ಜೀವನದಲ್ಲಿಯೇ ಗಣಿತದ ಅನೇಕ ಉದಾಹರಣೆಗಳು ಅಡಗಿವೆ. ಸೂಕ್ತ ವಿಧಾನದಲ್ಲಿ ಕಲಿತರೆ ಗಣಿತ ಅತಿ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಮೂಲಭೂತ ಸಂಪ್ರದಾಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ನಿರಂತರ ಅಭ್ಯಾಸ ಮಾಡಿದರೆ ಗಣಿತದಲ್ಲಿ ಉತ್ತಮ ಸಾಧನೆ ಸಾಧ್ಯ. ಸೂತ್ರಗಳನ್ನು ಕೇವಲ ಜಪಿಸುವುದಕ್ಕಿಂತ ಅವುಗಳ ಅರ್ಥವನ್ನು ತಿಳಿದುಕೊಳ್ಳಬೇಕು. ತಪ್ಪುಗಳಿಂದ ಭಯ ಪಡುವುದಕ್ಕಿಂತ ಅವುಗಳಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಬಿಜಿಎಸ್ ಕಾಲೇಜು ಪ್ರಾಂಶುಪಾಲ ದಿವ್ಯಕುಮಾರ್ ಮಾತನಾಡಿದರು. ಭಾಗಮಂಡಲ ಬಿಜಿಎಸ್ ವಿದ್ಯಾಸಂಸ್ಥೆ ಪ್ರಾಂಶುಪಾಲ ಕೀರ್ತಿ ಕುಮಾರ್, ಇಸಿಒ ನವೀನ್, ಕುಮಾರ್, ಎಸ್‌ಇಎಸ್ ವಿದ್ಯಾಸಂಸ್ಥೆ ಪ್ರಾಂಶುಪಾಲ ನಾರಾಯಣ್, ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳಿದ್ದರು.