ಸಕಲೇಶಪುರ ಪಟ್ಟಣದ ಎಆರ್‌ಟಿಒ ಕಚೇರಿಯಲ್ಲಿ ಎಆರ್‌ಟಿಒ ಸರಸ್ವತಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  
ಹಾಸನ

ದಂಡದಲ್ಲಿ ಶೇ.50 ವಿನಾಯಿತಿ ಸದುಪಯೋಗಪಡಿಸಿಕೊಳ್ಳಿ

ಲೋಕೇಶ್ ಮನು. ಡಿ
ಸಕಲೇಶಪುರ: ನಿಯಮಗಳನ್ನು ಉಲ್ಲಂಘನೆ ಮಾಡಿ ದಂಡವನ್ನು ಕಟ್ಟಬೇಕಾಗಿರುವ ವಾಹನಗಳ ಮಾಲೀಕರಿಗೆ ಶೇ.50ರಷ್ಟು ದಂಡದಿಂದ ವಿನಾಯಿತಿ ನೀಡಲಾಗುತ್ತಿದ್ದು, ಈ ಅವಕಾಶವನ್ನು ವಾಹನಗಳ ಮಾಲೀಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಆರ್‌ಟಿಒ ಸರಸ್ವತಿ ಹೇಳಿದರು.
ಪಟ್ಟಣದ ಎಆರ್‌ಟಿಒ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 1991-92ರಿಂದ 2019-20ರ ಅವಧಿಯಲ್ಲಿ ಮೋಟಾರು ವಾಹನ ಕಾಯ್ದೆ / ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ, ಬಾಕಿ ಇರುವ ಡಿ.ಎಸ್.ಎ (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50(ಶೇ. ಐವತ್ತರಷ್ಟು ಮಾತ್ರ) ಪಾವತಿ ಮಾಡಲು 21.11.2025 ರಿಂದ 12.12.2025 ವರೆಗೆ ಕಾಲಾವಕಾಶ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
3ದಶಕಗಳ ಹಳೇ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ಪಾವತಿಗೆ ಮತ್ತೆ ಶೇ.50ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ದಂಡ ಪಾವತಿಗೆ 20 ದಿನಗಳ ಸಮಯ ನೀಡಲಾಗಿದೆ. ರಾಜ್ಯದ ಎಲ್ಲ ಸಂಚಾರ ಪೊಲೀಸ್ ಠಾಣೆಗಳು, ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್(ಕೆಎಸ್‌ಪಿ) ಹಾಗೂ ಬೆಂಗಳೂರು ಒನ್ ಸೇರಿ ಆನ್‌ಲೈನ್ ಮೂಲಕ ಕೂಡ ದಂಡ ಪಾವತಿಗೆ ಅವಕಾಶ ಕೊಡಲಾಗಿದೆ. ಆಗಸ್ಟ್‌ನಲ್ಲಿ ಸಹ ಸಂಚಾರ ನಿಯಮಗಳ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಷ್ಟು ವಿನಾಯ್ತಿ ನೀಡಿತ್ತು. ಆಗ ಬೆಂಗಳೂರಲ್ಲಿ 5 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡು 100 ಕೋಟಿ ರೂ. ಹಣ ಸಂಗ್ರಹ ವಾಗಿತ್ತು. ಈಗ ಮತ್ತೆ ಹಳೇ ಸಂಚಾರ ಪ್ರಕರಣಗಳ ವಿಲೇವಾರಿಗೆ ಸಾರ್ವಜನಿಕರಿಗೆ ದಂಡ ಪಾವತಿಸಲು ಅವಕಾಶ ಕೊಟ್ಟಿದೆ.
ಎಆರ್‌ಟಿಒ ಕಚೇರಿಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಆದೇಶಿಸಿದ್ದು, ಸಾರ್ವಜನಿಕರು ಮಧ್ಯವರ್ತಿಗಳ ಮೊರೆಹೋಗದೆ ಆನ್‌ಲೈನ್ ಮೂಲಕ ಸೇವೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು. ಇದರಿಂದ ವಾಹನಗಳ ಮಾಲೀಕರು ದಂಡವನ್ನು ಕಟ್ಟಬೇಕಾದ ಪ್ರಮಾಣದಲ್ಲಿ ಶೇ.50ರಷ್ಟು ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ವಾಹನ ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂರ್ದಭದಲ್ಲಿ ಎಆರ್‌ಟಿಒ ಇಲಾಖೆ ಅಧೀಕ್ಷಕ ಗಿರೀಶ್ ಇದ್ದರು.