ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಕರ್ನಾಟಕ ವಿಧಾನಸಭೆೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರನ್ನು ದೇಗುಲ ಆಡಳಿತದಿಂದ ಸ್ವಾಗತಿಸಲಾಯಿತು. 
ಹಾಸನ

ಬೇಲೂರು ಶಿಲ್ಪ ಕಲೆ ಮೆಚ್ಚಿದ ಉಪಸಭಾಪತಿ

ಲೋಕೇಶ್ ಮನು. ಡಿ
ಬೇಲೂರು: ಕರ್ನಾಟಕ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರು ಬೇಲೂರಿನ ವಿಶ್ವ ವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ದೇಗುಲದಲ್ಲಿನ ಹೋಯ್ಸಳರ ಶಿಲ್ಪ ಕಲೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಸಭೆ ಉಪ ಸಭಾಪತಿ ದೇವಾಲಯಕ್ಕೆ ಆಗಮಿಸಿದ ಸಂದರ್ಭ ದೇಗುಲದ ಅರ್ಚಕರು ಪೂರ್ಣಕುಂಭ ಗೌರವದೊಂದಿಗೆ ಸ್ವಾಗತಿಸಿ ಕುಂಭಾರತಿ ಮೂಲಕ ದೇವರ ದರ್ಶನ ಪಡೆದು ಶ್ರೀಚನ್ನಕೇಶವಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕರ್ನಾಟಕ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹೋಯ್ಸಳರ ಶಿಲ್ಪಕಲೆಯ ಜೀವಂತ ನಿದರ್ಶನವಾಗಿದೆ. ಇಂತಹ ಐತಿಹಾಸಿಕ ಸ್ಥಳಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಈ ಹಿಂದೆ ಬೇಲೂರು ದೇಗುಲವನ್ನು ವಿಶ್ವ ದರ್ಜೆಗೇರಿಸಲು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದೆ. ಈಗಾಗಲೇ ಈ ದೇಗುಲ ಯುನೆಸ್ಕೋ ಪಟ್ಟಿಗೆ ಸೇರಿದೆ. ವಿಶ್ವ ದರ್ಜೆಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಭವಿಷ್ಯದಲ್ಲಿ ಈ ದೇವಾಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದರು.
ಈ ಹಿಂದೆ ಇಲ್ಲಿ ಹೊಯ್ಸಳ ಮಹೋತ್ಸವ ಆಚರಿಸಿದ್ದು, ಅದು ಈಗ ನಿಂತಿರುವುದು ಗಮನಕ್ಕೆ ಬಂದಿದ್ದು, ಹೊಯ್ಸಳ ಮಹೋತ್ಸವ ನಡೆಸುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ್, ಜಮಾಲೂದ್ದೀನ್, ಮೀನಾಕ್ಷಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಮುಖಂಡರಾದ ಜುಬೇರ್ ಅಹಮದ್, ಬಶೀರ್, ದೇಗುಲದ ಪ್ರಧಾನ ಅರ್ಚಕರಾದ ಶ್ರೀ ನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಕಂದಾಯಾಧಿಕಾರಿ ನಟರಾಜ್, ದೇಗುಲದ ಇಒ ಯೋಗೇಶ್ ಸೇರಿದಂತೆ ಇತರರಿದ್ದರು.
ರುದ್ರಪ್ಪ ಮಾನಪ್ಪ ಲಮಾಣಿ ಅವರ ದೇವಾಲಯ ಭೇಟಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತರು ಹಾಗೂ ಸ್ಥಳೀಯರು ಹೆಚ್ಚಾಗಿ ಆಗಮಿಸಿದ್ದರು. ಈ ಸಂದರ್ಭ ಪೊಲೀಸ್ ಇಲಾಖೆಯಿಂದ ಬಿಗಿಭದ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು.