ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಮಠದಲ್ಲಿ ನ.25ರಿಂದ 28ರವರೆಗೆ ನಡೆಯಲಿರುವ ಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
ಹಾಸನ

25ರಿಂದ ಸುಬ್ರಹ್ಮಣ್ಯೇಶ್ವರಸ್ವಾಮಿ, ರಂಗನಾಥಸ್ವಾಮಿ ಜಾತ್ರೆ

ಚನ್ನರಾಯಪಟ್ಟಣ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ತಾಲೂಕಿನ ಕುಂದೂರು ಸುಬ್ರಹ್ಮಣ್ಯೇಶ್ವರಸ್ವಾಮಿ ಹಾಗೂ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ನ.25ರಿಂದ 28ರವರೆಗೆ ಜರುಗಲಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಮತ್ತು ಕೊಡಗು ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಶ್ರೀ ಕ್ಷೇತ್ರ ಕುಂದೂರು ಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನ.26 ಮತ್ತು 26 ಎರಡು ದಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ನ.25ರಂದು ದೇವಾಲಯದ ಆವರಣದಲ್ಲಿ ಪ್ರಾತಃಕಾಲ ಶ್ರೀ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಲಲಿತ ಸಹಸ್ರನಾಮ, ಲಲಿತ ತ್ರಿಶತಿ, ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಲಿದೆ. ಗೋಧೂಳಿ ಲಗ್ನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮ ಧ್ವಜಾರೋಹಣ ನೆರವೇರಿಸಿ ರಥಕ್ಕೆ ನವಕಲಶಾರೋಹಣ ಮಾಡಲಿದ್ದಾರೆ ಎಂದು ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನ.26ರಂದು ಸಂಜೆ 4.30ಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ (ಷಷ್ಠಿ) ರಥೋತ್ಸವ ಹಾಗೂ ಸರ್ಪೋತ್ಸವ ಜರುಗಲಿದ್ದು, ನಂತರ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಬಳಿಕ ನಡೆಯಲಿರುವ ಧಾರ್ಮಿಕ ಕಾರ‌್ಯಕ್ರಮದಲ್ಲಿ ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರು, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನ.27ರಂದು ಶ್ರೀರಂಗನಾಥ ಸ್ವಾಮಿ ರಥೋತ್ಸವ ಹಾಗೂ ಗರುಡೋತ್ಸವ ಜರುಗಲಿದೆ.
ನ.28ರಂದು ಕುಂದೂರು ಮಠದ ಹಿಂದಿನ ಪೀಠಾಧ್ಯಕ್ಷರ ಪುಣ್ಯಾರಾಧನೆ, ಗುರು ಸ್ಮರಣೋತ್ಸವ ಕಾರ್ಯಕ್ರಮವಿದ್ದು, ನಂತರ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ತಿಳಿಸಿದರು.