ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಮುಂಭಾಗ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡುತ್ತಿರುವ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಸಾರಿಗೆ ಅಧಿಕಾರಿ ಸರಸ್ವತಿ ಇತರರು ಇದ್ದರು. 
ಹಾಸನ

ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ

ಬೇಲೂರು: ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸರಸ್ವತಿ ಶುಕ್ರವಾರ ಚಾಲನೆ ನೀಡಿದರು.
ಇಂದು ಪ್ರತಿಯೊಬ್ಬರೂ ಉಸಿರಾಡುತ್ತಿರುವ ಗಾಳಿಯ ಗುಣಮಟ್ಟ ದಿನೇದಿನೆ ಕುಸಿಯುತ್ತಿರುವುದಕ್ಕೆ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಕಾರಣ. ಇದು ಮನುಷ್ಯರ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟಾಗುತ್ತಿದೆ. ವಾಹನಗಳಿಂದ ಉಂಟಾಗುವ ಹೊಗೆ, ಕೆಮಿಕಲ್‌ಗಳ ಅವಶೇಷ, ಧೂಳು, ಕೈಗಾರಿಕೆಗಳ ತ್ಯಾಜ್ಯಗಳು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಇದನ್ನು ಕಡಿಮೆಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ವಾಹನ ಚಾಲಕರು ತಮ್ಮ ವಾಹನಗಳಿಗೆ ನಿಯಮಿತವಾಗಿ ಹೊಗೆ ತಪಾಸಣೆ ಮಾಡಿಸಬೇಕು. ಹೊಗೆ ಜಾಸ್ತಿ ಬಿಡುವ ವಾಹನಗಳನ್ನು ರಸ್ತೆಯಲ್ಲಿ ಓಡಿಸದೆ ತಕ್ಷಣ ದುರಸ್ತಿ ಮಾಡಿಸಬೇಕು. ಜತೆಗೆ ಹೆಚ್ಚು ಶಬ್ದ ಮಾಡಬಾರದು. ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ ವಾಯು ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಪರಿಸರವನ್ನು ಮಾಲಿನ್ಯ ರಹಿತವಾಗಿಸಲು ಸರ್ಕಾರ ಮಾತ್ರವಲ್ಲ ಸಾರ್ವಜನಿಕರ ಸಹಕರವೂ ಮಹತ್ವದ್ದಾಗಿದೆ. ಯುವಕರು ವಿದ್ಯಾರ್ಥಿಗಳು, ನಾಗರಿಕರು ಈ ಬಗ್ಗೆ ಜಾಗೃತರಾದಾಗ ಮಾತ್ರ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ಸ್ವಚ್ಛ ಪರಿಸರ ನೀಡಲು ಸಾಧ್ಯ. ಪ್ರತಿಯೊಬ್ಬ ವಾಹನಗಳ ಮಾಲೀಕರು, ಸಂಸ್ಥೆಗಳ ಮುಖ್ಯಸ್ಥರು ತಮ್ಮ ಹೊಣೆಗಾರಿಕೆ ಅರಿತು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಇತ್ತೀಚಿಗೆ ವಾಹನ ಚಾಲನೆ ಮಾಡಲು ವಯೋಮಿತಿ ಇದ್ದರೂ ಪಾಲಕರು ಪ್ರೌಢಾವಸ್ಥೆಯ ಮಕ್ಕಳಿಗೆ ವಾಹನ ಚಲಾಯಿಸಲು ಕೊಡುತ್ತಿದ್ದು ಅಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಲಾಗುವುದು ಎಂದು ಎಚ್ಚರಿಸಿದರು.
ಸಕಲೇಶಪುರ ಸಹಾಯಕ ಪ್ರಾದೇಶಿಕ ಕಚೇರಿಯ ಹಿರಿಯ ಮೋಟಾರ್ ನಿರೀಕ್ಷಕ ಪದ್ಮನಾಭ ಮಾತನಾಡಿದರು. ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಅಧೀಕ್ಷಕ ಗಿರೀಶ್, ಸಿಬ್ಬಂದಿ ವೀಣಾ, ಅಶೋಕ್, ಗೋಕಲ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಚೇತನ್ ಗೆಂಡೇಹಳ್ಳಿ, ಬಿಕ್ಕೋಡು ಯುವರಾಜ್. ರವಿ ಮೊಟಾರ್ಸ್ ಮಾಲೀಕ ಯತೀಶ್, ಮೀಸೆ ಮಹೇಶ್ ಇದ್ದರು.