ಅರಕಲಗೂಡು ತಾಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಕಾವೇರಿ ನದಿ ದಂಡೆ ಮೇಲೆ ಕಾಣಿಸಿಕೊಂಡ ಮೊಸಳೆ.
ಅರಕಲಗೂಡು: ಕಟ್ಟೆಪುರದ ಕೃಷ್ಣರಾಜ ಅಣೆಕಟ್ಟೆಯ ಬಳಿ ಇತ್ತೀಚೆಗೆ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗುತ್ತಿದ್ದು, ಭಾರಿ ಆತಂಕ ಮೂಡಿಸಿದೆ.
ಸೋಮವಾರ ಬೆಳಗ್ಗೆಯೂ ಮೊಸಳೆ ನದಿ ದಂಡೆಯ ಮೇಲೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಭಯ ಹೆಚ್ಚಿಸಿದೆ.
ಮೈಸೂರು ಅರಸರ ಕಾಲದಲ್ಲಿ ಲಕ್ಷಾಂತರ ರೈತರ ಕೃಷಿಭೂಮಿಗಳಿಗೆ ನೀರು ಹರಿಸುವ ಉದ್ದೇಶದಿಂದ ನಿರ್ಮಿಸಿರುವ ಅಣೆಕಟ್ಟೆಯ ತೀರದಲ್ಲಿ ಪ್ರತಿದಿನ ಜಾನುವಾರುಗಳಿಗೆ ನೀರುಣಿಸುವುದು, ಮಹಿಳೆಯರು ದಿನನಿತ್ಯದ ಕೆಲಸಗಳಿಗಾಗಿ ನೀರು ಬಳಸುವುದು ಸಾಮಾನ್ಯ. ಆದರೆ ಇತ್ತೀಚಿನ ಮೊಸಳೆ ಚಲನವಲನದಿಂದ ಈ ಪ್ರದೇಶದಲ್ಲಿ ಭೀತಿ ಸೃಷ್ಟಿಸಿದೆ.
ಅಣೆಕಟ್ಟಿನ ಪಕ್ಕದಲ್ಲಿರುವ ಜಲವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರೂ ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳಿಗೆ ವಿಷಯ ತಿಳಿಸಿ ಮೊಸಳೆಯನ್ನು ಸ್ಥಳಾಂತರಿಸಿ, ನದಿ ತೀರದಲ್ಲಿ ಎಚ್ಚರಿಕಾ ಫಲಕಗಳನ್ನು ಅಳವಡಿಸುವಂತೆ ಜನರು ಆಗ್ರಹಿಸಿದ್ದಾರೆ.
ಅರಕಲಗೂಡು ತಾಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ಕಾವೇರಿ ನದಿ ತೀರದಲ್ಲಿ ಮೊಸಳೆ ಕಾಣಿಸಿಕೊಂಡ ಸ್ಥಳಕ್ಕೆ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳಾದ ಮಹೇಶ್, ವಿಶ್ವನಾಥ, ದೇವೇಂದ್ರ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.