ಅರಕಲಗೂಡು ಕೆಲ್ಲೂರು ಬಡಾವಣೆಗೆ ಮಂಗಳವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.
ಅರಕಲಗೂಡು: ಪಪಂ 14ನೇ ವಾರ್ಡ್ ಕೆಲ್ಲೂರು ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಂಗಳವಾರ ಬೆಳಗ್ಗೆ ಕೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ, ಬಡಾವಣೆ ವೀಕ್ಷಿಸಿದ ಅವರು ಇಲ್ಲಿನ ಪರಿಸ್ಥಿತಿ ನೋಡಿದರೆ 25 ವರ್ಷಗಳ ಹಿಂದೆ ಹೋದಂತೆ ಕಾಣುತ್ತದೆ ಎಂದು ಅಧಿಕಾರಿಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜನಾಂಗದರು ವಾಸಿಸುವ ಬಡಾವಣೆಯಲ್ಲಿನ ಗುಂಡಿ ಬಿದ್ದ ರಸ್ತೆ, ಚರಂಡಿಗಳು, ಸಮುದಾಯ ಭವನ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ನಿರ್ಮಾಣದ ಕಳಪೆ ಕಾಮಗಾರಿ ಮನೆಗಳು, ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುವ ಸ್ಥಿತಿ, ಶಿಥಿಲಗೊಂಡಿರುವ, ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಆದೇಶಿಸಿದರು.
ಸರ್ಕಾರದ ಯೋಜನೆಗಳು ಸಮರ್ಪಕವಾಗಿ ದೊರಕುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಅಧಿಕಾರಿಗಳು ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಮಂಗಳವಾರ ನಗರ ವೀಕ್ಷಣೆ ಕಾರ್ಯ ನಡೆಸುತ್ತಿದ್ದು, ಇಂದು ಪಟ್ಟಣದ ಕೆಲ್ಲೂರು ಬಡಾವಣೆಗೆ ಭೇಟಿ ನೀಡಿ, ವೀಕ್ಷಣೆ ನಡೆಸಿದ್ದು, ಇಲ್ಲಿ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ಬಹಳಷ್ಟು ಜನರಿಗೆ ವೃದ್ಧಾಪ್ಯ, ವಿಧವಾ, ಸಂಧ್ಯಾಸುರಕ್ಷ ವೇತನ ದೊರೆಯುತ್ತಿಲ್ಲ ವೆಂಬ ದೂರುಗಳು ಇವೆ. ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ವಲಸೆ ಕಾರ್ಮಿಕರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಜಿಲ್ಲಾದ್ಯಂತ ಈ ಕುರಿತು ದೂರುಗಳು ಕೇಳಿ ಬರುತ್ತಿವೆ. ಬೇಲೂರು, ಸಕಲೇಶಪುರ, ಅರಕಲಗೂಡು ಈ ಭಾಗಗಳಲ್ಲಿ ಅಸ್ಸಾಂ ರಾಜ್ಯದ ವಲಸಿಗ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದಲ್ಲದೆ ಅವರುಗಳಲ್ಲಿ ಬಾಲ್ಯವಿವಾಹಗಳು ಅಧಿಕವಾಗಿದ್ದು, ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭವತಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶಗಳಾಗುತ್ತಿವೆ ಎಂಬ ಸ್ಥಳೀಯರಿಂದ ದೂರು ಬರುತ್ತಿವೆ. ಕಾರ್ಮಿಕರನ್ನು ಎಲ್ಲಿಂದ ಕರೆ ತರುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿ ಜಾಗೃತಿ ವಹಿಸಲು ಕಂದಾಯ, ಪೊಲೀಸ್, ಕಾರ್ಮಿಕ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ತಂಡವನ್ನು ರಚಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.
ಜಿಲ್ಲಾದ್ಯಂತ ಸರ್ಕಾರಿ ಭೂಮಿಗಳು ಹಾಗೂ ನಗರ ವ್ಯಾಪ್ತಿಗಳಲ್ಲಿ ಸರ್ಕಾರಿ ಸ್ಥಳಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಹಲವಾರು ದಾಖಲಾತಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಆಸ್ತಿ ರಕ್ಷಣೆಗೆ ಜಿಲ್ಲಾ ಮಟ್ಟದ ತಂಡ ರಚಿಸಲಾಗುತ್ತಿದ್ದು, ಈ ಮೂಲಕ ಸರ್ಕಾರಿ ಆಸ್ತಿಗಳ ಉಳಿವಿಗೆ ಕ್ರಮ ವಹಿಸುವುದಾಗಿ ಹೇಳಿದರು.
ಪಪಂ ಮುಖ್ಯಾಧಿಕಾರಿ ನಾಗೇಂದ್ರಕುಮಾರ್, ತಾಲೂಕು ಕೃಷಿ ಅಧಿಕಾರಿ ಕವಿತಾ, ತಾಲೂಕು ಆರೋಗ್ಯಾಧಿಕಾರಿ ಪುಷ್ಪಲತಾ, ಪಿ.ಡಿ.ರುದ್ರಮುನಿ, ಸಿ.ಸ್ವಾಮಿ, ಎಇಇ ಮಂಜುನಾಥ್, ಸಿಡಿಪಿಒ ವೆಂಕಟೇಶ್, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.