ತಮ್ಮೂರಿನ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಎದುರು ಸಿಕ್ಕಿ ಎಲ್ಲ ಮಕ್ಕಳನ್ನು ಮಾತನಾಡಿಸಿ, ಜತೆಯಲ್ಲಿ ಫೋಟೋ ತೆಗೆಸಿಕೊಂಡರು 
ಹಾಸನ

ಸುವರ್ಣ ಸೌಧ ಕಣ್ತುಂಬಿಕೊಂಡ ಮಕ್ಕಳು

ಅರಸೀಕೆರೆ ಗ್ರಾಮಾಂತರ: ಶಾಲಾ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ ಹಾರನಹಳ್ಳಿ ಸರ್ಕಾರಿ ಪ್ರೌಢಶಾಲೆ ಮಕ್ಕಳು ಬೆಳಗಾವಿಯ ಸುವರ್ಣ ಸೌಧವನ್ನು ಹತ್ತಿರದಿಂದ ಕಂಡು ಸಂತೋಷಗೊಂಡರು.
ತಮ್ಮೂರಿನ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಎದುರು ಸಿಕ್ಕಿ ಎಲ್ಲ ಮಕ್ಕಳನ್ನು ಮಾತನಾಡಿಸಿ, ಜತೆಯಲ್ಲಿ ಫೋಟೋ ತೆಗೆಸಿಕೊಂಡರು. ಈ ಕ್ಷಣದಲ್ಲಿ ಮಕ್ಕಳ ಜತೆಗೆ ಶಿಕ್ಷಕರೂ ಹೆಚ್ಚು ಖುಷಿಪಟ್ಟರು. ಎಂದಿನಂತೆ ವರ್ಷದ ಕೊನೆಯಲ್ಲಿ ಪ್ರೌಢಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು. ಬೆಳಗಾವಿಗೆ ಬಂದಿದ್ದೇವೆ, ಹಾಗೆಯೇ ಸುವರ್ಣಸೌಧ ನೋಡಿ ಹೋಗೋಣ ಎಂದುಕೊಂಡರು. ಗುರುವಾರ ತಮ್ಮ ಕ್ಷೇತ್ರದ ಮಕ್ಕಳು ಬಂದಿದ್ದಾರೆ ಎಂಬುದನ್ನು ಅರಿತ ಶಿವಲಿಂಗೇಗೌಡ ಅವರು ಅಧಿವೇಶನದಿಂದ ಹೊರ ಬಂದು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿದರು. ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡ ಹಲವು ಮಕ್ಕಳು, ಸುವರ್ಣಸೌಧವನ್ನು ಹತ್ತಿರದಿಂದ ಕಣ್ತುಂಬಿಕೊಂಡ ಖುಷಿ ಒಂದೆಡೆಯಾದರೆ, ನಮ್ಮೂರಿನ ಶಾಸಕರು ನಮ್ಮೊಂದಿಗೆ ಇಲ್ಲಿ ಕೆಲಹೊತ್ತು ಕಳೆದ ಅವಿಸ್ಮರಣೀಯ ಕ್ಷಣವನ್ನು ನಾವೆಂದೂ ಮರೆಯುವುದಿಲ್ಲ ಎಂದರು.
ಕಾಂಗ್ರೆಸ್ ಯುವ ಘಟಕದ ಮುಖಂಡ ಪೃಥ್ವಿ, ಶಿಕ್ಷಕರಾದ ಶರಣಪ್ಪ ಬಳೆಗಾರ್, ಶಾಂತಕುಮಾರಿ, ತನುಜಾ, ದೇವಿಕಾ, ಟ್ರಾವೆಲರ್ ವ್ಯವಸ್ಥಾಪಕ ರಂಗನಾಥ್ ಇತರರು ಉಪಸ್ಥಿತರಿದ್ದರು.