ಬೇಲೂರಿನಲ್ಲಿ ಹನುಮದ್ ವ್ರತಾಚರಣೆ ಅಂಗವಾಗಿ ಶ್ರೀವೀರಾಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು.
- ಶ್ರೀವೀರಾಂಜನೇಯಸ್ವಾಮಿ ದೇಗುಲದಲ್ಲಿ ಹೋಮ, ವಿಶೇಷ ಪೂಜೆ
- ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ರಾಮಭಕ್ತ ಹನುಮಂತ
- ಉತ್ಸವಮೂರ್ತಿ ಮೆರವಣಿಗೆ
ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇಗುಲದ 13ನೇ ವಾರ್ಷಿಕೋತ್ಸವ ಹಾಗೂ ಹನುಮದ್ ವ್ರತದ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಶನಿವಾರ ಅದ್ದೂರಿಯಾಗಿ ಸಾಗಿತು.
ಶ್ರೀವೀರಾಂಜನೇಯಸ್ವಾಮಿ ದೇಗುಲ ಟ್ರಸ್ಟ್ ವತಿಯಿಂದ ಹನುಮದ್ ವ್ರತದ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜೆಯೊಂದಿಗೆ ಹೋಮ ಹವನ ನೆರವೇರಿಸಲಾಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ಉತ್ಸವಮೂರ್ತಿ ಪ್ರತಿಷ್ಠಾಪಿಸಿದ ನಂತರ ತಾಲೂಕಿನ ವಿವಿಧ ಗ್ರಾಮ ಮತ್ತು ಪಟ್ಟಣದ ಕೆಲ ಬಡಾವಣೆಗಳಿಂದ ಬೃಹತ್ ಗಾತ್ರದ ಪುಷ್ಪಹಾರಗಳನ್ನು ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇಗುಲಕ್ಕೆ ತಂದು ಉತ್ಸವ ಮೂರ್ತಿಗೆ ಸಮರ್ಪಿಸಲಾಯಿತು.
ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಪುಷ್ಪ ಮಂಟಪದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶೋಭಾಯಾತ್ರೆ ಮೂಲಕ ಮೆರವಣಿಗೆ ನಡೆಸಲಾಯಿತು. ಯುವಕರು ಬೈಕ್‌ಗಳಿಗೆ ಹನುಮನ ಭಾವಚಿತ್ರವಿರುವ ಧ್ವಜಗಳನ್ನು ಕಟ್ಟಿ ಪಟ್ಟಣದಲ್ಲಿ ಸಂಚರಿಸಿ ಭಕ್ತಿ ಪ್ರದರ್ಶಿಸಿದರು. ಮಧ್ಯಾಹ್ನದ ನಂತರ ನಡೆದ ಶೋಭಾಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಡಿಜೆ ಸೌಂಡ್ ಹಾಗೂ ವಿವಿಧ ವಾದ್ಯ, ಡೋಲುಗಳ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.
ಹನುಮದ್ ವ್ರತಾಚರಣೆ ಹಾಗೂ ಶೋಭಾಯಾತ್ರೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಟ್ಟಣದ ವಿವಿಧ ದೇಗುಲ, ಮಸೀದಿಗಳ ಸಮೀಪ ಪೊಲೀಸ್ ಗಸ್ತು ಹಾಕಲಾಗಿತ್ತು.
ಪುರಸಭೆ ಅಧ್ಯಕ್ಷೆ ಉಷಾ ಸತೀಶ್. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್, ಸಮನ್ವಿ ಹೋಟೆಲ್ ಮಾಲೀಕ ನಾಗೇನಹಳ್ಳಿ ಸಂತೋಷ್, ಪುರಸಭೆ ಸದಸ್ಯರಾದ ಜಗದೀಶ್, ಪ್ರಭಾಕರ್, ಶ್ರೀನಿವಾಸ್, ತಹಸೀಲ್ದಾರ್ ಶ್ರೀಧರ್, ಕಂಕನವಾಡಿ. ಡಿವೈಎಸ್‌ಪಿ ಗೋಪಿ, ಇನ್‌ಸ್ಪೆಕ್ಟರ್ ರೇವಣ್ಣ ಇತರರು ಇದ್ದರು.
ನೃತ್ಯ ಮಾಡುವಾಗ ಕುಸಿದು ಬಿದ್ದ ಭಕ್ತ
ಬೇಲೂರಿನಲ್ಲಿ ನಡೆಯುತ್ತಿದ್ದ ಹನುಮದ್ ವ್ರತ ಹಾಗೂ ಶೋಭಾಯಾತ್ರೆಯಲ್ಲಿ ಕುಣಿಯುತ್ತಿದ್ದ ಭಕ್ತರೊಬ್ಬರು ಕುಸಿದು ರಸ್ತೆಯಲ್ಲೇ ಬಿದ್ದರು. ಈ ಸಂದರ್ಭ ಅಲ್ಲಿಯೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ತಮ್ಮ ಸಿಬ್ಬಂದಿಯೊಂದಿಗೆ ವ್ಯಕ್ತಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದರು.
13ನೇ ವರ್ಷದ ಹನುಮದ್ ವ್ರತವನ್ನು ಸಾವಿರಾರು ಭಕ್ತರೊಂದಿಗೆ ಸಂಭ್ರಮದಿಂದ ಆಚರಿಸುತಿದ್ದೇವೆ. ಹನುಮನು ಪ್ರತಿಯೊಬ್ಬರನ್ನು ಕಾಪಾಡುವ ಮೂಲಕ ನಾಡಿನ ಸಮಸ್ತ ಜನರಿಗೂ ಆಶೀರ್ವಾದ ಲಭಿಸಲಿ ಎಂದು ಆಶಿಸುತ್ತೇನೆ
ಎಚ್.ಕೆ.ಸುರೇಶ್ ಶಾಸಕ, ಬೇಲೂರು