ಅರಕಲಗೂಡು ತಾಲೂಕಿನ ಹಾನಗಲ್ ಗ್ರಾಮದಲ್ಲಿ ಶನಿವಾರ ಶ್ರೀ ಹಾನಗಲ್ಲಮ್ಮ ದೇವತೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಅರಕಲಗೂಡು : ತಾಲೂಕಿನ ಹಾನಗಲ್ ಗ್ರಾಮದ ಅಧಿದೇವತೆ ಶ್ರೀ ಹಾನಗಲ್ಲಮ್ಮ ದೇವಾಲಯದ ಸಿಡಿ ಹಾಗೂ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಕಲ ಧಾರ್ಮಿಕ ವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.
ಸಿಡಿ ಆಚರಣೆ ಅಂಗವಾಗಿ ಎಲ್ಲೆಡೆ ತಳಿರು ತೋರಣ, ವಿದ್ಯುತ್ ದೀಪಾಲಂಕಾರ ಗಳಿಂದ ಗ್ರಾಮ ಕಂಗೊಳಿಸುತ್ತಿತ್ತು. ಮಂಗಳ ವಾಧ್ಯಗಳ ನಾದ, ವಿಧ ವಿಧವಾಗಿ ಅಲಂಕರಿಸಿದ್ದ ಗ್ರಾಮದ ದೇವಾಲಯಗಳು ಎಲ್ಲರ ಮನಸೂರೆಗೊಳ್ಳುತ್ತಿತ್ತು. ಕಾವೇರಿ ನದಿಯಲ್ಲಿ ದೇವರ ಮೂರ್ತಿಗಳಿಗೆ ಗಂಗಾಸ್ನಾನ ಮಾಡಿಸಿದ ನಂತರ ಕಳಸ ಹೊತ್ತ ಮಹಿಳೆಯರು ಹಾಗೂ ಹಾನಗಲ್ಲಮ್ಮ, ಚಿಕ್ಕಯ್ಯ, ದೊಡ್ಡಯ್ಯ, ಶನಿದೇವರ ಉತ್ಸವ ಮೂರ್ತಿಗಳಿಗೆ ವಿವಿಧ ರೀತಿಯ ಹೂವಿನ ಅಲಂಕಾರಗಳನ್ನು ಮಾಡಿ ಅಡ್ಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಸಾಗಲಾಯಿತು. ರಸ್ತೆಯ ಉದ್ದಕ್ಕೂ ಸೋಮನ ಕುಣಿತ, ಪಲ್ಲಕ್ಕಿ ಕುಣಿತ, ಕೊಂಬು ಕಹಳೆ ವಿಶೇಷ ಆಕರ್ಷಣೀಯವಾಗಿತ್ತು. ನಂತರ ಉತ್ಸವ ಮೂರ್ತಿಗಳನ್ನು ಹಾನಗಲ್ಲಮ್ಮನ ದೇವಾಲಯದ ಆವರಣಕ್ಕೆ ಕರೆತರಲಾಯಿತು.
ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದ ಸಿಡಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ಶ್ರೀ ಅಂಜನೇಯಸ್ವಾಮಿ ದೇವಾಲಯದಲ್ಲಿ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿ ಸಿಡಿ ಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಸಿಡಿ ಆಚರಣೆಗೆ ಚಾಲನೆ ನೀಡಲಾಯಿತು. ಬೆಳಗಿನಿಂದ ಉಪವಾಸವಿದ್ದ ಸಿಡಿ ಹರಕೆ ಸಲ್ಲಿಸುವವರು ಸಿಡಿ ಕಂಬಕ್ಕೆ ಪೂಜೆ ಸಲ್ಲಿಸಿ ಭಕ್ತಿಯ ಉನ್ಮಾದದಲ್ಲಿ ಸಿಡಿಗೇರಿದರು. ಹರಕೆ ಹೊತ್ತಿದ್ದ ಭಕ್ತರನ್ನು ಸಿಡಿಗೆ ಕಟ್ಟಿ ಹಾನಗಲ್ಲಮ್ಮ ದೇವಾಲಯದ ಸುತ್ತು ಪ್ರದಕ್ಷಿಣೆ ಹಾಕಿಸುವ ಮೂಲಕ ಹರಕೆ ತೀರಿಸಿದರು.
ಜೋಡಿ ರಥೋತ್ಸವ ಸಡಗರ: ಶನಿವಾರ ಶ್ರೀ ಹಾನಗಲ್ಲಮ್ಮ ದೇವತೆ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು. ಬೆಳಗಿನಿಂದ ದೇವಾಲಯದಲ್ಲಿ ವಿವಿಧ ಪೂಜಾ ವಿಧಾನಗಳನ್ನು ಪೂರೈಸಲಾಯಿತು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಅಲಂಕೃತ ರಥದ ಮೇಲೆ ದೇವತೆ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರು ಹರ್ಷೋದ್ಗಾರದ ನಡುವೆ ತೇರು ಎಳೆಯಲಾಯಿತು. ದೊಡ್ಡ ತೇರಿನ ಹಿಂದೆ ಶನಿದೇವರ ಮೂರ್ತಿಯನ್ನು ಹೊತ್ತ ಚಿಕ್ಕ ತೇರು ಹಿಂಬಾಲಿಸಿತು. ಭಕ್ತರು ತೇರಿನತ್ತ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪುನೀತರಾದರು.