ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಎಸ್‌ಎನ್‌ಎಚ್‌ಸಿಎಸ್ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ರಾಜ್ಯಶಾಸ ಉಪನ್ಯಾಸಕ ಸಿ.ಬಿ.ರಾಮಕೃಷ್ಣ ದಂಪತಿಯನ್ನು ಅಭಿನಂದಿಸಲಾಯಿತು. ಎಸ್.ಜಿ. ರಾಮಕೃಷ್ಣ, ಎಚ್.ಜೆ.ಮಹೇಶ್ ಬೋರೇಗೌಡ, ಪ್ರಮೋದ್ ಇತರರು ಇದ್ದರು.
ಹಿರೀಸಾವೆ: ನಮ್ಮ ಬೆನ್ನ ಹಿಂದೆ ಗುರುವಿನ ಮಾರ್ಗದರ್ಶನವಿದ್ದರೆ ಮುಂದಿನ ಗುರಿಯನ್ನು ಸುಲಭ ಹಾಗೂ ಯಶಸ್ವಿಯಾಗಿ ಸಾಧಿಸಲು ಸಾಧ್ಯವಾಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಎಸ್‌ಎನ್‌ಎಚ್‌ಸಿಎಸ್ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಶಾಸ ಉಪನ್ಯಾಸಕ ಸಿ.ಬಿ.ರಾಮಕೃಷ್ಣ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುರುವಿನ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ. ಗುರುವೇ ಇಲ್ಲದಿದ್ದರೆ ಜ್ಞಾನ ಹಾಗೂ ಅರಿವು ಸಿಗುತ್ತಿರಲಿಲ್ಲ. ಅಜ್ಞಾನ ಕವಿದಿದ್ದರೆ ಸಮಾಜ ಸೃಷ್ಟಿಯಾಗುತ್ತಿರಲಿಲ್ಲ. ಓದು ಹಾಗೂ ಬರಹವಷ್ಟೇ ಶಿಕ್ಷಣವಲ್ಲ. ಇವುಗಳ ಜತೆಗೆ ಶೈಕ್ಷಣಿಕ ಹಂತದಲ್ಲಿ ಶಿಸ್ತು, ಶ್ರದ್ಧೆ, ಸೌಮ್ಯತೆ, ಮೌಲ್ಯಯುತ ಪದಬಳಕೆ ಹಾಗೂ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವುದು ನಿಜವಾದ ಶಿಕ್ಷಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶೌಚಗೃಹ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಪಿಎಂಶ್ರೀ ಯೋಜನೆಯಡಿ ಮತ್ತಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಶೀಘ್ರದಲ್ಲಿಯೇ ಪೈಪ್‌ಲೈನ್‌ನೊಂದಿಗೆ ಟ್ಯಾಂಕ್ ಅಳವಡಿಸುವ ಮೂಲಕ 250 ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಕಾಲೇಜಿನಲ್ಲಿ ರಾಜ್ಯಶಾಸ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸಿ.ಬಿ.ರಾಮಕೃಷ್ಣ ಅವರನ್ನು ಈ ವೇಳೆ ಅಭಿನಂದಿಸಲಾಯಿತು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಸ್.ಜಿ. ರಾಮಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಮಹೇಶ್, ನಿರ್ದೇಶಕ ಬೋರೇಗೌಡ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್, ಜ್ಞಾನಪ್ರಭ ಇಂಟರ್‌ನ್ಯಾಷನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಜಿ.ಪ್ರಭಾಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ಲಕ್ಷ್ಮಣಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕೇಶ್, ಉಪನ್ಯಾಸಕ ವೃಂದ, ಪ್ರಮುಖರಾದ ಬಾಬು, ಮಂಜುನಾಥ್ ಹಾಗೂ ಇತರರು ಇದ್ದರು.