ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಗುರು ಪೂರ್ಣಿಮೆ ಕಾರ್ಯಕ್ರಮ ವೈಭವದಿಂದ ನೆರವೇರಿತು. ಆಶ್ರಮದ ಶ್ರೀ ಗುರುಮೂರ್ತಿ ಗುರೂಜಿ ನೇತೃತ್ವ ವಹಿಸಿದ್ದರು.  
ಹಾಸನ

ಸಿದ್ದಾಶ್ರಮದಲ್ಲಿ ಗುರುಪೂರ್ಣಿಮೆ ಆಚರಣೆ

ಎ. ಆರ್. ರಘುರಾಮ
ಹಿರೀಸಾವೆ : ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಶ್ರೀ ಸಾಯಿ ಸಿದ್ದಾಶ್ರಮದಲ್ಲಿ ಬುಧವಾರ ಗುರುಪೂರ್ಣಿಮೆಯನ್ನು ವೈಭವದಿಂದ ಆಚರಿಸಲಾಯಿತು.
ಸಾಯಿಬಾಬಾ ಮೂರ್ತಿಗೆ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ವ್ಯಾಸ ಪೂಜೆ, ಸದ್ಗುರು ಪೂಜೆ, ಗಂಗಾಪೂಜೆ, ಭಿಕ್ಷಾ ವಂದನೆ ನೆರವೇರಿತು.
ನಂತರ ಆಶೀರ್ವಚನ ನೀಡಿದ ಆಶ್ರಮದ ಶ್ರೀ ಗುರುಮೂರ್ತಿ ಗುರೂಜಿ, ದೇಗುಲ ಹಾಗೂ ಮಠ-ಮಾನ್ಯಗಳಿಂದ ಧರ್ಮ ಮತ್ತು ಸಂಪ್ರದಾಯಗಳು ಉಳಿಯುತ್ತವೆ ಎಂದರು.
ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಭಕ್ತರು ಸಹಕಾರ ನೀಡಿದರೆ ಧಾರ್ಮಿಕ ಕೇಂದ್ರಗಳು ಉನ್ನತೀಕರಣಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಗುರುಪೂರ್ಣಿಮೆ ಆಚರಣೆಯು ಸತ್ಕಾರ್ಯಗಳಿಗೆ ಪ್ರೇರಣೆ ನೀಡಲಿ ಎಂದು ಅವರು ಆಶಿಸಿದರು. ಇದೇ ಸಂದರ್ಭ ಗಣಪತಿ ಹೋಮ, ಶಿರಡಿ ಮಾದರಿಯಲ್ಲಿ ಆರತಿ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಗಿನಿಂದ ಸಂಜೆವರೆಗೆ ಸಾಯಿಬಾಬಾ ಅವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದರ್ಶನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಮಧ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.