ಬೇಲೂರು ತಾಲೂಕಿನ ಕೆತ್ತಪ್ಪಯ್ಯನ ಕೆರೆಯ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುತ್ತಿರುವ ಚೆಕ್‌ಡ್ಯಾಂ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಸೋಮಣ್ಣ, ಅಶೋಕ್, ನವೀನ್, ಶಿವನಾಗ್, ಶೇಖರ್, ಶಿವಣ್ಣ, ಪ್ರಸನ್ನ ಇತರರಿದ್ದರು.
- ಶಾಸಕ ಎಚ್.ಕೆ.ಸುರೇಶ್ ಹೇಳಿಕೆ
ಬೇಲೂರು: ತಾಲೂಕಿನ ಹಳೇಬೀಡು ಸಮೀಪದ ಕೆತ್ತಪ್ಪಯ್ಯನ ಕೆರೆಯ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಸಣ್ಣ ನೀರಾವರಿ ಇಲಾಖೆಯ ಮೂಲಕ ಮಲೆನಾಡು ಹಾಗೂ ಅರೆಮಲೆನಾಡು, ಬಯಲು ಸೀಮೆ ಪ್ರದೇಶಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಚೆಕ್‌ಡ್ಯಾಂಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಕೆತ್ತಪ್ಪಯ್ಯನ ಕೆರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಜಾವಗಲ್ ಸೇರಿದಂತೆ ಬೇಲೂರು ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಇನ್ನೂ 15 ಕೋಟಿ ರೂ. ಕಾಮಗಾರಿಗಳು ಬಾಕಿ ಇದೆ. ಅಲ್ಲದೆ ಈ ಚೆಕ್‌ಡ್ಯಾಂ ನಿರ್ಮಾಣದಿಂದ ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್ ಹೋಬಳಿ ವ್ಯಾಪ್ತಿಯ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದ ಅಂತರ್ಜಲ ಹೆಚ್ಚಳವಾಗುವುದರೊಂದಿಗೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ನೀರಾವರಿ ವ್ಯವಸ್ಥೆ ಸುಧಾರಣೆಯಿಂದ ರೈತರು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಲಿದ್ದು, ಇಲ್ಲಿಂದ ಬೇರೆಡೆಗೆ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಕಳುಹಿಸಲು ಸಹಕಾರಿಯಾಗಲಿದೆ. ರೈತರ ಆರ್ಥಿಕ ಸ್ಥಿತಿಗತಿ ಬಲಗೊಳ್ಳಲಿದೆ. ಇಲ್ಲಿ ಒತ್ತುವರಿಯಾಗಿದ್ದ 17ಎಕರೆ ಜಾಗವನ್ನು ತೆರವುಗೊಳಿಸಲಾಗಿದ್ದು, ಈ ಯೋಜನೆಯಿಂದ ಈ ಭಾಗದ 80 ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ವಿಶೇಷವಾಗಿ ಗಮನಹರಿಸಬೇಕು. ಕಾಮಗಾರಿ ವೇಳೆ ಅಕ್ಕಪಕ್ಕದ ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಣ್ಣ, ಯಲಹಂಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಸ್ಥಳೀಯರಾದ ನವೀನ್, ಶಿವನಾಗ್, ಶೇಖರ್, ಶಿವಣ್ಣ, ಪ್ರಸನ್ನ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರಿದ್ದರು.