ಹೆಬ್ಬಾಳು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು. ದೇಶಾಣಿ ಅನಂದ್, ಬಿ.ಎಂ.ಸಂತೋಷ್, ಗೋಪಾಲ್, ಸುರೇಶ್, ಲಕ್ಷ್ಮಣ್, ಉಮಾಶಂಕರ್ ಇತರರಿದ್ದರು.
- ಹೆಬ್ಬಾಳು ಗ್ರಾಮ
- ಡಾ.ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣ
ಬೇಲೂರು: ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಅನಂದ್ ಸೇರಿದಂತೆ ಗಣ್ಯರು ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಸಮಿತಿ ಅಧ್ಯಕ್ಷ ದೇಶಾಣಿ ಅನಂದ್ ಮಾತನಾಡಿ, ಶುಭ ಕಾರ್ಯ ಸೇರಿದಂತೆ ಸಣ್ಣಪುಟ್ಟ ಕಾರ್ಯಕ್ರಮ ನಡೆಸಲು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಬ್ಬಾಳು ಗ್ರಾಮದಲ್ಲಿ ಜನರ ಆಶಯದಂತೆ ಡಾ.ಅಂಬೇಡ್ಕರ್ ಭವನಕ್ಕೆ ಸಂಸದ ಶ್ರೇಯಸ್ ಪಟೇಲ್ ಅವರು ಮೊದಲ ಹಂತವಾಗಿ 3 ಲಕ್ಷ ರೂ. ಅನುದಾನ ನೀಡಿದ್ದು, ಈ ಹಣ ತಳಪಾಯಕ್ಕೆ ಮೀಸಲಾಗಿದೆ. ಇಲ್ಲಿನ ಕೆಲಸ ಮುಗಿದ ನಂತರ ಹಂತ ಹಂತವಾಗಿ ಕಟ್ಟಡ ನಿರ್ಮಾಣಕ್ಕೂ ಸಂಸದರು ಅನುದಾನ ಕೊಡುವುದಾಗಿ ಮಾತು ಕೊಟ್ಟಿದ್ದಾರೆ ಎಂದರು.
ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಬಿ.ಎಂ.ಸಂತೋಷ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಸಂಸದರು ಹೆಬ್ಬಾಳು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದಾರೆ. ಹೆಬ್ಬಾಳು ದೊಡ್ಡ ಗ್ರಾಮವಾಗಿದ್ದು ಈ ಗ್ರಾಮದ ಸಾರ್ವಜನಿಕರ ಬೇಡಿಕೆಯಂತೆ ಅವರ ಅನುಕೂಲಕ್ಕಾಗಿ ಇದು ಸದುಪಯೋಗವಾಗಲಿದೆ. ಜತೆಗೆ ಈ ಗ್ರಾಮದ ಅಭಿವೃದ್ಧಿಗೆ ಸಂಸದರು ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಮತ್ತು ದೀನ ದಲಿತರ ಪರವಾಗಿ ಕೆಲಸ ಮಾಡುತ್ತಿದ್ದು, ಈ ಬಾರಿ ಜನಪ್ರಿಯ ಬಜೆಟ್ ಮಂಡನೆಯಾಗಲಿದೆ ಎಂದರು.
ಹೆಬ್ಬಾಳು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಲಕ್ಷ್ಮಣ್, ಕಾಂಗ್ರೆಸ್ ಮುಖಂಡ ಹೆಬ್ಬಾಳು ಉಮಾಶಂಕರ್, ಮುಖಂಡರಾದ ರಾಕೇಶ್, ಗಿರೀಶ್, ದರ್ಶನ್, ಶಿವಮೂರ್ತಿ, ಹಾಲಿನ ಡೇರಿ ನಿರ್ದೇಶಕ ರುದ್ರೇಶ್ ಸೇರಿದಂತೆ ಇತರರಿದ್ದರು.