ಸಾಧಿಸುವ ಸಂಕಲ್ಪವಿದ್ದರೆ ಕೃಷಿ ಕಾಯಕದಲ್ಲಿ ಯಶಸ್ಸು ನಿಶ್ಚಿತ ಎಂಬುದನ್ನು ತಾಲೂಕಿನ ಭೈರಗೊಂಡನಹಳ್ಳಿ ಎಂಬಿಎ ಪದವೀಧರ ರಂಜಿತ್ ಸಾಬೀತು ಪಡಿಸಿದ್ದಾರೆ.
ಇದಕ್ಕೆ ಪೂರಕ ಎನ್ನುವಂತೆ ತಂದೆ ಜಗದೀಶ್ ಮಾರ್ಗದರ್ಶನದಲ್ಲಿ ಪೂರ್ವಿಕರ ಸಾಂಪ್ರದಾಯಿಕ ಬೇಸಾಯದ ಜತೆಗೆ ಆಧುನಿಕ ಪದ್ಧತಿಯಲ್ಲಿ ಸಮಗ್ರ ಬೆಳೆ ಬೆಳೆಯುವ ಮೂಲಕ ಯುವ ರೈತರಿಗೆ ಮಾದರಿಯಾಗಿದ್ದಾರೆ.
ದಾಳಿಂಬೆ, ಶುಂಠಿ, ಗುಲಾಬಿ ಬೇಸಾಯದ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆಯಂತಹ ಉಪಕಸುಬುಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿರುವುದು ಪ್ರಗತಿಯ ಸಂಕೇತವಾಗಿದೆ. ಮೂರು ಎಕೆರೆ ಜಮೀನಿನಲ್ಲಿ ಹತ್ತಾರು ವರ್ಷದಿಂದ ದಾಳಿಂಬೆ ಬೆಳೆದು ಹೆಚ್ಚಿನ ಲಾಭ ಗಳಿಸುವ ಮೂಲಕ ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.
ರಾಗಿ, ಜೋಳ, ಮುಸುಕಿನ ಜೋಳ ಬೆಳೆಯುವ ಹೊಲದಲ್ಲಿ ತೋಟಗಾರಿಕೆ ಬೆಳೆಗಳಿಂದ ನಿರೀಕ್ಷೆಗೂ ಮೀರಿದ ಆದಾಯ ಕಂಡುಕೊಳ್ಳುವಲ್ಲಿ ಸಫರಾಗಿರುವುದು ಯುವ ಕೃಷಿಕರಿಗೆ ಪ್ರೇರಣೆ ಯಂತಿದೆ.
ದಾಳಿಂಬೆ ತಳಿಗಳ ಆಯ್ಕೆ, ಕೀಟನಾಶಕ, ಪೋಷಕಾಂಶಗಳ ಬಳಕೆ, ಸಾವಯವ ಗೊಬ್ಬರದ ಅಗತ್ಯ ಮನವರಿಕೆ ಮಾಡಿಕೊಂಡಿರುವುದಲ್ಲದೆ, ಬೆಳೆ ಬೆಳೆಯುವ ತಂತ್ರಗಾರಿಕೆ ಕರಗತ ಮಾಡಿಕೊಂಡಿರುವುದು ಮತ್ತೊಂದು ವಿಶೇಷ. ನೀರಿನ ಸದ್ಭಳಕೆ ಮನಗಂಡು ಹನಿ ನೀರಾವರಿಗೆ ಒತ್ತು ನೀಡಿದ್ದಾರೆ. ಆಧುನಿಕ ತಂತ್ರಜ್ಞಾನದ ಜತೆಗೆ ವೈಜ್ಞಾನಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಬೆಳೆಗೆ ತಗುಲುವ ಕೀಟಬಾಧೆ ಹಾವಳಿ ತಡೆಗೆ ತಜ್ಞರ ಸಲಹೆಯ ಮೇರೆಗೆ ತಕ್ಕಮಟ್ಟಿಗೆ ಕೀಟನಾಶಕ ಬಳಕೆ ಮಾಡುತ್ತಾರೆ. ಕೊಂಚ ನಿರ್ಲಕ್ಷ್ಯ ತೋರಿದರೆ ಬೆಳೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬುದು ರಂಜಿತ್ ಅವರ ಎಚ್ಚರಿಕೆಯ ನುಡಿ.
ಬಾಗಲಕೋಟೆ ಜಿಲ್ಲೆಯಿಂದ ಸೂಪರ್ ಭಗವ ತಳಿಗೆ ಸೇರಿದ 1000 ಸಸಿಗಳನ್ನು ನಾಟಿ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ನಾಟಿಯಿಂದ ಫಸಲು ಪಡೆಯುವವರೆಗೆ ಪ್ರತಿ ಸಸಿಗೆ ಅಂದಾಜು 2 ಸಾವಿರ ರೂ. ವೆಚ್ಚ ತಗುಲುತ್ತದೆ. ಆರಂಭದಲ್ಲಿ ಲಾಭ ಬರುವುದು ಕಡಿಮೆ. ತದನಂತರ ಖರ್ಚಿನ ಪ್ರಮಾಣ ತಗ್ಗಲಿದ್ದು, ಸಮರ್ಪಕ ಪೋಷಣೆ ನೀಡಿದಲ್ಲಿ ಆದಾಯ ದ್ವಿಗುಣಗೊಳಿಸುವ ಅವಕಾಶಗಳಿವೆ. ಬಿಸಿಲಿನ ಜತೆಗೆ ಹದ ಮಳೆ ದಾಳಿಂಬೆ ಬೆಳೆಗೆ ಸೂಕ್ತವಾಗಿದೆ. ನಾಟಿ ನಂತರ ಎರಡು ವರ್ಷ ಪೂರ್ಣಗೊಳ್ಳುವ ವೇಳೆಗೆ ಬೆಳೆ ಕಟಾವಿಗೆ ಸಿದ್ಧಗೊಳ್ಳುತ್ತದೆ. ಒಟ್ಟಾರೆ ಐದು ಎಕರೆ ಭೂಮಿಯಲ್ಲಿ ದಾಳಿಂಬೆ ಬೆಳೆದರೆ 50ರಿಂದ 55 ಟನ್ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ರಂಜಿತ್.
ಸೂಪರ್ ಭಗವ ತಳಿಯ ದಾಳಿಂಬೆ ಹಣ್ಣಿಗೆ ನೆರೆಯ ಬಾಂಗ್ಲಾದೇಶದಲ್ಲಿ ಭಾರಿ ಬೇಡಿಕೆಯಿದ್ದು, ಖರೀದಿದಾರರು ತೋಟಗಳಿಗೆ ದೌಡಾಯಿಸಿ ವ್ಯಾಪಾರ ಕುದುರಿಸಿಕೊಳ್ಳುವ ಕಾಯಕ ಮುಂದುವರಿಸಿದ್ದು ಮಾರಾಟದ ಗೊಂದಲ ದೂರವಾಗಿದೆ. ಚನ್ನೈ, ಬೆಂಗಳೂರು, ತಮಿಳುನಾಡು, ಮುಂಬೈ, ಪುಣೆ, ಮಂಗಳೂರು ಸೇರಿದಂತೆ ರಾಜ್ಯ ಹೊರರಾಜ್ಯಗಳಿಗೂ ದಾಳಿಂಬೆ ಕಳುಹಿಸಿಕೊಡಲಾಗುತ್ತಿದೆ. ಬೆಳೆಗಾರನಿಗೆ ದುಬಾರಿ ವೆಚ್ಚ ತಗುಲಿದರೂ ಅಗತ್ಯ ಮುನ್ನೆಚ್ಚೆರಿಕೆ ಕ್ರಮ ಕೈಗೊಂಡಲ್ಲಿ ಲಾಭ ನಿಶ್ಚಿತ. ತೆಂಗು, ಅಡಕೆ ಜತೆಗೆ ದಾಳಿಂಬೆ ಪ್ರಮುಖ ವಾಣಿಜ್ಯ ಬೆಳೆ. ಇದಲ್ಲದೆ ಒಂದು ಎಕರೆಯಲ್ಲಿ ಗುಲಾಬಿ ಬೆಳೆಯಲಾಗುತ್ತಿದ್ದು, ಇದಕ್ಕೆ ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ.