ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಕೆಂಪುಸಾಗರ ಶಿವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆ: ಸರ್ಕಾರಿ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷದ ವೇದಿಕೆ ಮಾಡಿಕೊಳ್ಳುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ನಡೆ ಖಂಡನೀಯ ಎಂದು ಬಿಜೆಪಿ ಮುಖಂಡ ಕೆಂಪುಸಾಗರ ಶಿವರಾಜ್ ಆರೋಪಿಸಿದರು.
ಪಕ್ಷಾತೀತವಾಗಿ ನಡೆಯುವ ಗ್ರಾಮಸಭೆಗಳಲ್ಲಿ ಶಿಷ್ಟಾಚಾರ ಗಾಳಿಗೆ ತೂರಿ ಕಾಂಗ್ರೆಸ್ ಮುಖಂಡರಿಗೆ ಅವಕಾಶ ಕಲ್ಪಿಸುತ್ತಿರುವುದು ಸರಿಯಲ್ಲ. ಅಲ್ಲದೆ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಅಧಿಕಾರ ರಹಿತರಿಗೆ ಸ್ಥಾನ ಕೊಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಶಾಸಕರ ನಡೆ ಖಂಡನೀಯ. ಹೇಳುವುದು ಒಂದು ಕಾರ್ಯರೂಪಕ್ಕೆ ತರುವುದೇ ಮತ್ತೊಂದು ಎಂಬಂತಾಗಿದ್ದು, ಸಭೆ, ಸಮಾರಂಭ ಆಯೋಜಿಸುವ ಅಧಿಕಾರಿಗಳು ಲೋಪ ಸರಿಪಡಿಸಿಕೊಳ್ಳದಿದ್ದರೆ ಪ್ರಾಯಶ್ಚಿತ್ತ ಅನಿವಾರ್ಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಜನರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕರಾಗಿದ್ದೀರಿ ಎಂಬುದನ್ನು ಮರೆಯಬಾರದು. ಅವಕಾಶ ಮಾಡಿಕೊಟ್ಟ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಅವರನ್ನು ಬಿದ್ದು ಹೋಗುವ ಎತ್ತು ಎನ್ನುತ್ತೀರಿ, ಮತ್ತೊಂದೆಡೆ ಕುಡಿಯುವ ನೀರು, ಕೆರೆ ತುಂಬಿಸುವುದು, ರಸ್ತೆ, ಒಳಚರಂಡಿ ಒಳಗೊಂಡಂತೆ ಅರಸೀಕೆರೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಮಹಾಪೂರವನ್ನೇ ಹರಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಗ್ಗೆ ಏಕವಚನ ಬಳಸಿ ನಿಂದನೆ ಮಾಡುವುದು ಸರಿಯಲ್ಲ. ಕಣಕಟ್ಟೆ ಹೋಬಳಿಯಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರ್ ಯಾರ ಹೆಸರಲ್ಲಿದೆ ನೀವೇ ಹೇಳಿ?, ಇಲ್ಲವೇ ಸೂಕ್ತ ಸಂದರ್ಭದಲ್ಲಿ ನಾನೇ ದಾಖಲೆ ಬಿಡುಗಡೆ ಮಾಡುತ್ತೇನೆ. ಅಧಿಕಾರ ಮದ ನೆತ್ತಿಗೆ ಏರಿದ್ದು ಇಳಿಸುವ ಕಾಲ ಹತ್ತಿರವಾಗಿದೆ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್, ತಿಮ್ಮೇಗೌಡ, ಚಂದ್ರು ಇನ್ನಿತರರು ಇದ್ದರು.