ಹಿರೀಸಾವೆಯ ಗದ್ದೆಯೊಂದರಲ್ಲಿ ಸುರಿದಿರುವ ಮಳೆ ಭೂಮಿಯನ್ನು ಹದಗೊಳಿಸಲು ಪೂರಕವಾಗಿರುವುದು.
- ರೈತರಲ್ಲಿ ಮೂಡಿದ ಸಂತಸ
- ಭೂಮಿ ಹದ ಮಾಡುವ ಕಾರ್ಯಕ್ಕೆ ಚಾಲನೆ
ಹಿರೀಸಾವೆ: ಹೋಬಳಿ ಯಾದ್ಯಂತ ಸೋಮವಾರ ಮಧ್ಯಾಹ್ನ ಹದವಾದ ಮಳೆ ಸುರಿದಿದ್ದು ರೈತರಲ್ಲಿ ಸಂತಸ ತಂದಿದೆ.
ಗ್ರಾಮದಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ 2.15 ಗಂಟೆಗೆ ಪ್ರಾರಂಭಗೊಂಡ ಮಳೆ 3.50ರವರೆಗೆ ಗಾಳಿಯ ಅಬ್ಬರವಿಲ್ಲದೆ ಧಾರಾಕಾರವಾಗಿ ಸುರಿಯಿತು. ಪ್ರಾರಂಭದಲ್ಲಿ ಮಿಂಚು, ಗುಡುಗು ಹಾಗೂ ಸಿಡಿಲು ಕಾಣಿಸಿಕೊಂಡಿತ್ತಾದರೂ ನಂತರ ಯಾವುದೇ ಅಬ್ಬರವಿಲ್ಲದೆ ಹದವಾಗಿ ಸುರಿಯಿತು.
ಸೋಮವಾರ ಸಂಜೆ ನಂತರವೂ ತಾಲೂಕಿನ ವ್ಯಾಪ್ತಿಯಲ್ಲಿ ಸೋನೆ ಮಳೆ ಮುಂದುವರಿದಿತ್ತು.
ಬಿತ್ತನೆ ಆಗಿಲ್ಲ: ಹಿರೀಸಾವೆ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರಿನಿಂದಲೂ ವಾಡಿಕೆಯಂತೆ ಮಳೆ ಇಲ್ಲದೆ ಬರದ ಬೀಡಾಗಿತ್ತು. ಯುಗಾದಿಯ ಹೊಸ ಸಂವತ್ಸರದ ನಂತರ ಮಳೆ ಪ್ರಾರಂಭಗೊಂಡಿದ್ದರೆ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲು ಅನುಕೂಲವಾಗುತ್ತಿತ್ತು. ಯುಗಾದಿ ನಂತರ 2 ತಿಂಗಳು ಕಳೆದರೂ ಮಳೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಯಾವುದೇ ಮುಂಗಾರು ಬೆಳೆಗಳು ಬಿತ್ತನೆ ಮಾಡಲಾಗಿಲ್ಲ. ಈಗಷ್ಟೇ ಮಳೆ ಪ್ರಾರಂಭವಾಗಿದ್ದು, ಜಮೀನುಗಳನ್ನು ಉಳುಮೆ ಮಾಡಿ ಗೊಬ್ಬರ ಹರಡಿ ಹದಗೊಳಿಸಲು ಅನುಕೂಲವಾಗಿದೆ. ಮಳೆ ತಡವಾದ ಕಾರಣ ನಿರೀಕ್ಷೆಯಂತೆ ಫಸಲು ಬರುವುದೂ ತಡವಾಗಲಿದೆ.
ಕಿರುಧಾನ್ಯ ಬೆಳೆಯಲು ನಿರಾಸಕ್ತಿ ಮೊದಲೆಲ್ಲ ಬೋರೆ ಪ್ರದೇಶಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಿಂದ ಕೊಳವೆಬಾವಿಗಳನ್ನು ಹೆಚ್ಚಾಗಿ ಹೊಂದಿದ್ದು ತೆಂಗು, ಅಡಕೆ, ಶುಂಠಿ ಹಾಗೂ ಬಾಳೆ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ. ಹಾಗಾಗಿ ಮುಂಗಾರು ಹಂಗಾಮಿನ ಬೆಳೆಗಳಾದ ಅಲಸಂದೆ, ಹೆಸರು, ಉದ್ದು ಹಾಗೂ ಎಳ್ಳು ಸೇರಿದಂತೆ ಕಿರುಧಾನ್ಯಗಳನ್ನು ಬೆಳೆಯುವ ಜಮೀನು ಕ್ಷೀಣಿಸುತ್ತಿದೆ. ಕೃಷಿಕರ ಆಸಕ್ತಿಯೂ ಬೇರೆ ಬೆಳೆಗಳತ್ತ ಸಾಗಿದೆ ಎಂದು ರೈತ ಸಲಹೆಗಾರ ಕರಿಕ್ಯಾತನಹಳ್ಳಿ ತುಳಸಿ ರಾಜ್ ಕಳವಳ ವ್ಯಕ್ತಪಡಿಸಿದರು.
ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆ-ಗಾಳಿಯ ಅಬ್ಬರಕ್ಕೆ ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ 65ಕ್ಕೂ ಹೆಚ್ಚಿನ ತೆಂಗಿನ ಮರಗಳು ಹಾಗೂ 26ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ತೆಂಗು ಹಾಗೂ ಬಾಳೆ ಬೆಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.