ಅರಕಲಗೂಡು ದೊಳ್ಳೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಕೃಷಿ ತರಬೇತಿ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಾಬು ಉದ್ಘಾಟಿಸಿದರು. ಸಲ್ಮಾನ್ ಖಾನ್, ಯೋಗೇಶ್, ದೊರೇಶ್, ಗೋವಿಂದೇಗೌಡ, ರಾಮಶೆಟ್ಟಿ ಇತರರಿದ್ದರು.  
ಹಾಸನ

ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ತಾಲೂಕು ಯೋಜನಾಧಿಕಾರಿ ಬಾಬು ಸಲಹೆ
ಅರಕಲಗೂಡು: ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆರೋಗ್ಯಕರವಾದ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಾಬು ತಿಳಿಸಿದರು.
ಬೆಳವಾಡಿ ಗ್ರಾಪಂ ವ್ಯಾಪ್ತಿಯ ದೊಳ್ಳೇನಹಳ್ಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಕೃಷಿ ತರಬೇತಿ ನಡೆಸಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಕೃಷಿ ಅಧಿಕಾರಿ ಸಲ್ಮಾನ್ ಖಾನ್ ಮಾತನಾಡಿ, ರೈತರು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರಗಳಿಗೆ ಆದ್ಯತೆ ನೀಡಬೇಕು. ಇದರಿಂದ ಆರೋಗ್ಯಕರ ಹಾಗೂ ಗುಣಮಟ್ಟದ ಬೆಳೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಳೆಗಳಿಗೆ ತಗಲುವ ರೋಗಗಳನ್ನು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ತಡೆಗಟ್ಟುವ ವಿಧಾನಗಳು ಹಾಗೂ ಸಮಗ್ರ ಸಾವಯವ ಕೃಷಿಯಿಂದ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ಯೋಗೇಶ್ ಮಾತನಾಡಿ, ಕೃಷಿ ಚಟುವಟಿಕೆ ಆರಂಭಿಸುವ ಮುನ್ನ ಮಣ್ಣು ಪರೀಕ್ಷೆ ಮಾಡಿಸಬೇಕು. ಬೀಜೋಪಚಾರ ಕೈಗೊಳ್ಳುವುದು ಹಾಗೂ ಅದರ ಪ್ರಯೋಜನಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಬಹುದು. ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಲಭ್ಯವಿರುವ ಅನುದಾನಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡರಾದ ದೊರೇಶ್, ಗೋವಿಂದೇಗೌಡ ಮಾತನಾಡಿದರು. ಗ್ರಾಮದ ರಾಮಶೆಟ್ಟಿ, ದೊಡ್ಡಮರಿಶೆಟ್ಟಿ, ಜವರಶೆಟ್ಟಿ, ಸೋಮೇಗೌಡ, ಚಂದ್ರ, ಶ್ರೀನಿವಾಸ್, ಲೋಕೇಶ್, ಗೀತಾ, ಕೃಷಿ ಮೇಲ್ವಿಚಾರಕ ಸುನೀಲ್ ಕುಮಾರ್, ಸೇವಾಪ್ರತಿನಿಧಿಗಳಾದ ಸುಶ್ಮಿತಾ, ಮಾನಸಾ, ಭೂಮಿಕಾ ಮತ್ತು ಗ್ರಾಮಸ್ಥರು, ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.