ಬೇಲೂರಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2027ರ ಜನ ಗಣತಿಗಾಗಿ ನೇಮಕವಾಗಿರುವ ಮೇಲ್ವೀಚಾರಕರು, ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಬೇಲೂರು: ಏ.1ರಿಂದ 15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು, ಏ.16ರಿಂದ ಮೇ 15ರವರೆಗೆ ಮನೆ ಮನೆಗೆ ತೆರಳಿ ಗಣತಿ ಕಾರ್ಯ ನಡೆಯಲಿದೆ. ಇದಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ನಿಮ್ಮ ಮನೆಗಳಿಗೆ ಬರುವ ಗಣತಿದಾರರಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ ತಿಳಿಸಿದರು.
2027ರ ಭಾರತದ ಜನ ಗಣತಿಗಾಗಿ ಇಲ್ಲಿನ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಗಣತಿದಾರರು, ಮೇಲ್ವಿಚಾರಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿ, ಬೇಲೂರು ತಾಲೂಕಿನಲ್ಲಿ ಒಟ್ಟು 498 ಬ್ಲಾಕ್‌ಗಳಿದ್ದು, ಗಣತಿ ಕಾರ್ಯಕ್ಕೆ 450 ಜನ ಗಣತಿದಾರರು ಹಾಗೂ 51 ಜನ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಗಣತಿ ಕಾರ್ಯ ನಡೆಯಲಿದ್ದು, ತಾಲೂಕು ಮಟ್ಟದಲ್ಲಿ ನನ್ನಮೇಲ್ವಿಚಾರಣೆಯಲ್ಲಿ ಜರುಗಲಿದೆ. ಈ ಸಂಬಂಧ ಮೂರು ಹಂತಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಸಿಗ್ಗಾವಿ, ಬಿಆರ್‌ಸಿ ಶಿವ ಮರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.