ಆಲೂರು ತಾಲೂಕಿನ ಗೇಕರವಳ್ಳಿ ಗ್ರಾಮದಲ್ಲಿರುವ ಮಡೆಮಾರಮ್ಮದೇವಿ.
ಆಲೂರು: ತಾಲೂಕಿನ ಗೇಕರವಳ್ಳಿ ಗ್ರಾಮದಲ್ಲಿ ಮಾ.29ರಿಂದ 31ರವರೆಗೆ ಶ್ರೀ ದೇವಿಯ ಜಾತ್ರಾ ಮಹೋತ್ಸವವು ಜರುಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ
ಮಾ.29ರಂದು ಶ್ರೀ ಮಡೆಮಾರಮ್ಮದೇವಿ ಹಾಗೂ ವೀರಭದ್ರೇಶ್ವರ ಕೆಂಚರಾಯಸ್ವಾಮಿ ಅವರಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ಅಭಿಷೇಕ ಪೂಜೆ, ಹೋಮ ಹವನ ಹಾಗೂ ಮಹಾ ಮಂಗಳಾರತಿ ನಡೆಸಲಾಗುತ್ತದೆ. ನಂತರ ಅದೇ ದಿನ ರಾತ್ರಿ ಗ್ರಾಮದ ದೊಡ್ಡ ಕೆರೆಗೆ ತೆರಳಿ ದೇವರುಗಳಿಗೆ ಗಂಗಸ್ಥಾನದೊಂದಿಗೆ ಅಡ್ಡೆಪಲ್ಲಕ್ಕಿ ಮುಖಾಂತರ ಗ್ರಾಮಕ್ಕೆ ಬರಮಾಡಿಕೊಂಡು ಗ್ರಾಮದಲ್ಲಿ ಅಡ್ಡೆ ಪಲ್ಲಕ್ಕಿ ಉತ್ಸವ ಹಾಗೂ ಚಾಮನ ಕುಣಿತ ಇರುತ್ತದೆ ಮತ್ತು ರಾತ್ರಿ 10 ಗಂಟೆಗೆ ಮಡೆ ಹಾಗೂ ಕೊಂಡದ ಕಗ್ಗಲಿ ಸೌದೆಗೆ ಅಗ್ನಿ ಸ್ಪರ್ಶ ಮಾಡಲಾಗುವುದು.
ಮಾ.30ರಂದು ಮುಂಜಾನೆ 7.30 ರಿಂದ 9ಗಂಟೆಯವರೆಗೆ ಕೆಂಡೋತ್ಸವ ಹಾಗೂ ಭಕ್ತಾದಿಗಳಿಗೆ ಕೆಂಡ ಹಾಯುವ ಕಾರ್ಯಕ್ರಮ ನಡೆಯಲಿದ್ದು, ತೀರ್ಥ, ಪ್ರಸಾದ ವಿನಿಯೋಗ ಇರುತ್ತದೆ. ಮಾ.31ರಂದು ಶ್ರೀ ಮಡೇ ಮಾರಮ್ಮನವರ ಬಂಟರಾದ ಶ್ರೀ ಸರಪಳಿ ಕೆಂಚರಾಯಸ್ವಾಮಿ ಅವರ ಭೂತನ ಸೇವೆ ಇರುತ್ತದೆ. ಈ ಎಲ್ಲ ಕಾರ್ಯಕ್ರಮಕ್ಕೆ ಭಕ್ತಾದಿಗಳು, ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗೇಕರವಳ್ಳಿ ಹುಲ್ಲಳ್ಳಿ ಗ್ರಾಮಸ್ಥರು ಹಾಗೂ ಅರ್ಚಕರು ಕೋರಿದ್ದಾರೆ.