ಹಾಸನ ನಗರದ ಮಹಾವೀರ ವೃತ್ತದಲ್ಲಿ ಕಬ್ಬು ಖರೀದಿಯಲ್ಲಿ ತೊಡಗಿರುವ ಗ್ರಾಹಕರು.
- ಸಂಕ್ರಾಂತಿ ಹಬ್ಬ ಆಚರಣೆಗೆ ಸಜ್ಜು
- ಅಗತ್ಯ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು
- ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರು
ಹಾಸನ: ಸುಗ್ಗಿಯ ಹಬ್ಬ ಸಂಕ್ರಾಂತಿ ಹಬ್ಬ ಆಚರಣೆಗೆ ಹಾಸನ ಜಿಲ್ಲೆ ಸಜ್ಜಾಗಿದೆ. ನಗರದ ಮಾರುಕಟ್ಟೆಗಳಲ್ಲಿ ಎಳ್ಳು-ಬೆಲ್ಲ, ಕಬ್ಬು, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ.
ಕಟ್ಟಿನ ಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ಸೇರಿದಂತೆ ಇತರೆಡೆ ಹೂವು, ಹಣ್ಣು, ಎಳ್ಳು, ಬೆಲ್ಲ, ಕಬ್ಬು ಖರೀದಿಯಲ್ಲಿ ಗ್ರಾಹಕರು ಮಗ್ನರಾಗಿದ್ದರು. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಮಾತಿದೆ. ಹೀಗಾಗಿ ಹಬ್ಬದ ಪ್ರಯುಕ್ತ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬು ವಿನಿಮಯ ಮಾಡಿಕೊಳ್ಳಲು ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಲು ಗ್ರಾಹಕರು ತೊಡಗಿದ್ದಾರೆ.
ಈ ಬಾರಿ ಬೆಲೆಗಳು ತುಸು ಹೆಚ್ಚಾಗಿದ್ದರೂ ಜನರಲ್ಲಿ ಹಬ್ಬದ ಉತ್ಸಾಹ ಮಾತ್ರ ಕುಗ್ಗಿಲ್ಲ. ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿ ಚೌಕಾಸಿ ಮಾಡುವ ಮೂಲಕ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಸಂತಸದಿಂದಲೆ ಖರೀದಿಸುತ್ತಿದ್ದದ್ದು ಕಂಡುಬಂತು.
ಹಬ್ಬದ ಅಂಗವಾಗಿ ಹುರಿದ ಕಡಲೆ ಬೀಜ ಕೆ.ಜಿಗೆ 160 ರೂ. ನಿಂದ 180 ರೂ.ಗಳವರೆಗೆ ಮಾರಾಟವಾಯಿತು. ಕತ್ತರಿಸಿದ ಬೆಲ್ಲ ಕೆ.ಜಿಗೆ 100 ರೂ.ರಿಂದ 140 ರೂ, ಕತ್ತರಿಸಿದ ಕೊಬ್ಬರಿ ಕೆ.ಜಿಗೆ 550 ರೂ. ನಿಂದ 600 ರೂ. ಹುರಿಗಡಲೆ ಕೆ.ಜಿಗೆ 135 ರೂ. ಸಕ್ಕರೆ ಅಚ್ಚು ಕೆ.ಜಿಗೆ 100 ರೂ. ಗಳಿಂದ 150 ರೂ. ಗಳವರೆಗೂ ಮಾರಾಟವಾದವು.
ನಗರದ ಪ್ರಮುಖ ರಸ್ತೆ ಬದಿಗಳಲ್ಲಿ ಕಬ್ಬನ್ನು ಮಾರಾಟ ಮಾಡುತ್ತಿದ್ದದ್ದು ಕಂಡುಬಂತು. ಕಬ್ಬು ಜೋಡಿಗೆ 100 ರಿಂದ 120 ವರೆಗೆ ಮಾರಾಟವಾಗಿದ್ದು, ಪುಟ್ಟಬಾಳೆ ಒಂದು ಕೆಜಿ 100 ರೂ. ನಿಂದ 160 ರೂ.ಗಳವರೆಗೆ ಮಾರಾಟ ಮಾಡುತ್ತಿದ್ದರು. ಅವರೆಕಾಯಿ ಕೆ.ಜಿ ಗೆ 50 ರೂ. ಸೇವಂತಿಗೆ ಹೂವು ಒಂದು ಮಾರಿಗೆ 50 ರೂ. ನಿಂದ 100 ರೂ.ಗಳ ವರೆಗೆ ಮಾರಾಟ ಮಾಡಲಾಯಿತು.
ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 250-300 ರೂ.ಗೆ ಮಾರಾಟವಾಗುತ್ತಿದೆ. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚನ್ನು ಬಂಧು, ಆಪ್ತರು ಹಾಗೂ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ. ಹಾಗಾಗಿ ಮನೆಗಳಲ್ಲಿ ಕಳೆದ ಒಂದು ವಾರದಿಂದಲೇ ಇವುಗಳ ತಯಾರಿ ನಡೆಯುತ್ತಿದೆ. ಕೆಲವರು ಅಂಗಡಿಗಳಲ್ಲಿ ದೊರೆಯುವ ಸಿದ್ಧ ಎಳ್ಳು- ಬೆಲ್ಲ ಖರೀದಿಸಿದರು.