ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಬೇಸರಗೊಂಡ ಗ್ರಾಹಕರು ಆಲೂರಿನಲ್ಲಿ ಏಜೆನ್ಸಿ ಕಚೇರಿ ಎದುರು ಜಮಾವಣೆಗೊಂದು ಆಕ್ರೋಶ ವ್ಯಕ್ತಪಡಿಸಿಸುತ್ತಿರುವುದು.
ಆಲೂರು: ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದ ಪಟ್ಟಣದ ಗ್ರಾಹಕರು ಹೈರಾಣಾಗಿದ್ದಾರೆ.
ಬುಕ್ಕಿಂಗ್ ಮಾಡಿ ಎರಡು ತಿಂಗಳಾದರೂ ಅನಿಲ ಸಿಲಿಂಡರ್ ತಲುಪದ ಹಿನ್ನಲೆಯಲ್ಲಿ ಶುಕ್ರವಾರ ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಏಜೆನ್ಸಿ ಕಚೇರಿ ಎದುರು ಗ್ರಾಹಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಯಾವ ತಾಲೂಕಿನಲ್ಲೂ ಉಂಟಾಗದ ಸಮಸ್ಯೆ ಆಲೂರಿನಲ್ಲಿ ಮಾತ್ರ ಏಕೆ ಎದುರಾಗಿದೆ ? ಏಜೆನ್ಸಿಯ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಶಾಮೀಲಾಗಿ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರಾ ? ಎರಡು ತಿಂಗಳ ಹಿಂದೆ ಬುಕ್ಕಿಂಗ್ ಆಗಿದ್ದ ಸಿಲಿಂಡರ್ ಸೇವೆ ಈವರೆಗೆ ಗ್ರಾಹಕರಿಗೆ ಏಕೆ ತಲುಪಿಲ್ಲ ? ಅಕ್ರಮ ಮಾರಾಟದಲ್ಲಿ ಸರಬರಾಜು ಏಜೆನ್ಸಿಯವರು ಪಾಲುದಾರರಾಗಿದ್ದಾರಾ ಎಂಬಿತ್ಯಾದಿ ಆರೋಪಗಳು ಗ್ರಾಹಕರಿಂದ ಕೇಳಿಬಂತು.
ಸಿಲಿಂಡರ್ ಸಮಸ್ಯೆ ವಿಚಾರವು ತಹಸೀಲ್ದಾರ್ ಮತ್ತು ಶಾಸಕರಿಗೆ ಗೊತ್ತಿದ್ದರೂ ಅವರು
ಜಾಣ ಮೌನ ವಹಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಏಜೆನ್ಸಿ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಿಲಿಂಡರ್ ಬುಕ್ಕಿಂಗ್ ಆಗಿರುವ ಸಂದೇಶ ಬಂದಿದೆ. ಆದರೆ ಮನೆಗೆ ಸರಬರಾಜಾಗಿಲ್ಲ ಎಂದು ಕಚೇರಿ ಸಿಬ್ಬಂದಿ ಗಮನಕ್ಕೆ ತಂದರೆ ಅವರು, ನಿಮ್ಮ ಪ್ರದೇಶದ ಡೆಲಿವರಿ ಬಾಯ್‌ಗಳನ್ನು ಕೇಳಿ ಎನ್ನುತ್ತಾರೆ. ಆದರೆ ಅವರೆಲ್ಲರೂ ಕರೆ ಸ್ವೀಕಾರ ಮಾಡುತ್ತಿಲ್ಲ. ಅಪರೂಪಕ್ಕೆ ಕರೆ ಸ್ವೀಕಾರ ಮಾಡಿದರೂ, ಕಚೇರಿಗೆ ಭೇಟಿ ನೀಡಿ ಕೇಳಿ ಎನ್ನುತ್ತಾರೆ. ಗ್ರಾಹಕರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತವಾಯಿತು. ತಹಸೀಲ್ದಾರ್ ಮಲ್ಲಿಕಾರ್ಜುನ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಶಾಂತಗೊಳಿಸಿದರು. ವ್ಯವಸ್ಥೆ ಸುಗಮಗೊಳಿಸುವ ಭರವಸೆ ನೀಡಿದರು.