ಗಂಡಸಿ ಹಳೇ ಸಂತೆ ಮೈದಾನದ ಶ್ರೀ ಶನೈಶ್ಚರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಕೆಂಡೋತ್ಸವದಲ್ಲಿ ಭಕ್ತರು ಸೇವೆ ಸಮರ್ಪಿಸುತ್ತಿರುವುದು.
ಗಂಡಸಿ: ಗಂಡಸಿ ಹಳೇ ಸಂತೆಮೈದಾನದ ಶ್ರೀ ಶನೈಶ್ಚರ ಸ್ವಾಮಿ ಜಾತ್ರಾ ಮಹೋತ್ಸವ ಸೋಮವಾರ ಮತ್ತು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.
ಸೋಮವಾರ ಬೆಳಗ್ಗೆ 8 ಗಂಟೆಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ ಮತ್ತು ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ಸ್ವಾಮಿಯವರಿಗೆ ಗಂಗಾಸ್ನಾನದ ನಂತರ ವಾದ್ಯಗೋಷ್ಠಿ ಹಾಗೂ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಸಾಗಿತು. ರಾತ್ರಿ 9 ಗಂಟೆಗೆ ಶನೈಶ್ಚರ ಸ್ವಾಮಿ ಕಲಾತಂಡದಿಂದ ಶ್ರೀ ರಾಜವಿಕ್ರಮ ಅಥವಾ ಶನಿಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.
ಕೆಂಡೋತ್ಸವ: ಮಂಗಳವಾರ ಬೆಳಗ್ಗೆ 7 ಗಂಟೆಗೆ ಶ್ರೀಸ್ವಾಮಿಯವರ ಮೂಲ ಸನ್ನಿಧಿಯ ಮುಂಭಾಗ ಕೆಂಡೋತ್ಸವ ನೆರವೇರಿಸಲಾಯಿತು. ಸಾವಿರಾರು ಭಕ್ತರು ಮಡಿಯುಟ್ಟು ಶ್ರದ್ಧಾ ಭಕ್ತಿಯಿಂದ ಕೆಂಡ ತುಳಿಯುವ ಮೂಲಕ ಸೇವೆ ಸಮರ್ಪಣೆ ಮಾಡಿದರು.