ಹಾಸನ ನಗರದ ಪೆಟ್ರೋಲ್ ಬಂಕ್ ಒಂದೆರಲ್ಲಿ ಬಾಟಲಿಗೆ ಪೆಟ್ರೋಲ್ ಹಾಕುವುದಿಲ್ಲ ಎಂದು ಬೋಡ್ ಹಾಕಿರುವುದು. 
ಹಾಸನ

ಜಿಲ್ಲೆಯಲ್ಲಿ ಕಾಡುತ್ತಿದೆ ಇಂಧನ ಕೊರತೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಲ್ಲಿ ಕಾಡುತ್ತಿದೆ ಇಂಧನ ಕೊರತೆ
  • ಪಶ್ಚಿಮ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ
  • ಕೃಷಿ ಚಟುವಟಿಕೆಗಳಿಗೂ ತಟ್ಟಿದ ಬಿಸಿ
ಕೆ.ಆರ್.ಪ್ರಸಿನ್ ಹಾಸನ
ಪಶ್ಚಿಮ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಪೆಟ್ರೋಲ್-ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಕೃಷಿ ಚಟುವಟಿಕೆಗೂ ಬಿಕ್ಕಟ್ಟಿನ ಬಿಸಿ ತಟ್ಟುತ್ತಿದೆ.
ಜಿಲ್ಲೆಯ ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಕೊಡುವುದನ್ನು ಸ್ಥಗಿತಗೊಳಿಸಿರುವುದರಿಂದ ಜಮೀನು ಕೆಲಸ ಮಾಡುತ್ತಿದ್ದ ಯಂತ್ರಗಳು ಸ್ಥಗಿತಗೊಂಡಿವೆ. ಹತ್ತಾರು ಕಿ.ಮೀ. ದೂರದ ವರೆಗೆ ಯಂತ್ರಗಳನ್ನೇ ತಂದು ಇಂಧನ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ನೀಡದಂತೆ ಆದೇಶವಾಗಿ 10 ದಿನ ಕಳೆದಿದ್ದರೂ ಈ ವರೆಗೆ ಅಷ್ಟಾಗಿ ಪಾಲನೆಯಾಗುತ್ತಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ಕಾನೂನು ಬಿಗಿಗೊಳಿಸಲಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ರೈತರು-ಬಂಕ್ ಸಿಬಂದಿ ಮಧ್ಯೆ ವಾಗ್ವಾದ ನಡೆಯುತ್ತಿದೆ. ಮೊದಲೆಲ್ಲಾ ಲೋಡ್ ನಿಯಮಿತವಾಗಿ ಬರುತ್ತಿತ್ತು. ಈಗ ನಾಲ್ಕೈದು ದಿನ ತಡವಾಗುತ್ತಿದೆ. ಮುಂದೆ ಪೆಟ್ರೋಲ್ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತದ ಆದೇಶ ಪಾಲಿಸಬೇಕಲ್ಲವೇ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಹೇಳುತ್ತಾರೆ. ಆದರೆ ಕೃಷಿ ಕೆಲಸಗಳಿಗೂ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ರೈತರು ಗೋಳಾಡುತ್ತಿದ್ದಾರೆ.
ಕೃಷಿ ಹಾಗು ತೋಟಗಾರಿಕೆ ಕೆಲಸಕ್ಕೆ ರೈತರು ವೀಡ್ ಕಟ್ಟರ್, ಟ್ರಾೃಕ್ಟರ್, ಟಿಲ್ಲರ್, ಸ್ಪ್ರೇಯರ್ ಮೊದಲಾದ ಯಂತ್ರಗಳನ್ನು ಬಳಸುತ್ತಾರೆ. ಇವುಗಳು ಕಾರ್ಯನಿರ್ವಹಿಸಬೇಕೆಂದರೆ ಪೆಟ್ರೋಲ್ ಅಥವಾ ಡೀಸೆಲ್ ಅತ್ಯಗತ್ಯ. ಇಂಧನ ಖಾಲಿಯಾದಾಗ ರೈತರು ಕ್ಯಾನ್‌ಗಳೊಂದಿಗೆ ಬೈಕ್‌ನಲ್ಲಿ ಬಂಕ್‌ಗೆ ಬರುವುದು ಸಾಮಾನ್ಯವಾಗಿತ್ತು. ಇದರಿಂದ ಅವರ ಕೆಲಸಕ್ಕೆ ಅನುಕೂಲವಾಗುತ್ತಿತ್ತು. ಆದರೆ ಈಗ ಸಾಧನಗಳನ್ನೇ ಬಂಕ್‌ಗೆ ತರಬೇಕಾಗಿದ್ದು, ಅವೈಜ್ಞಾನಿಕ ನಿಯಮ ಎಂಬುದು ರೈತರ ಅಂಬೋಣ.
200 ಲೀಟರ್ ಡೀಸೆಲ್ ನಿಗದಿ:
ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮತ್ತು 50 ಲೀ. ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಮೊದಲು ಎಷ್ಟು ಬೇಕಾದರೂ ಕೊಡುತ್ತಿದ್ದರು. ಆದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆಂಬ ಕಾರಣಕ್ಕೆ ಮಿತಿ ನಿಗದಿಗೊಳಿಸಲಾಗಿದೆ. ಈ ಹಿಂದೆ ಆಯಿಲ್ ಕಂಪನಿಯವರು ಸಾಲದ ರೂಪದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜು ಮಾಡುತ್ತಿದ್ದರು. ಪ್ರಸ್ತುತ ಆ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟು 226 ಪೆಟ್ರೋಲ್ ಬಂಕ್‌ಗಳಿದ್ದು, ನಿತ್ಯ ಅಂದಾಜು 2 ಲಕ್ಷ ಲೀಟರ್ ಇಂಧನ ಮಾರಾಟ ವಾಗುತ್ತದೆ ಎನ್ನಲಾಗಿದೆ. ಬಿಪಿಸಿಎಲ್ 39, ಹೆಚ್‌ಪಿಸಿಎಲ್ 67, ಎಲ್‌ಒಸಿಎಲ್ 79, ಎಂಆರ್‌ಪಿಎಲ್ 4, ನಯಾರಾ 33 ಹಾಗು ರಿಲಯನ್ಸ್ ಕಂಪನಿಯ 4 ಬಂಕ್‌ಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ತಕ್ಷಣಕ್ಕೆ ಇಂಧನ ಸಿಗುತ್ತಿಲ್ಲ:
ಮೊದಲಿಗೆ ಹೋಲಿಸಿದರೆ ಈಗ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಇಂಡೆಂಟ್ ಹಾಕಿದ ದಿನವೇ ಎಷ್ಟು ಲೋಡ್ ಬೇಕಾದರೂ ಬಂಕ್‌ಗಳಿಗೆ ಬರುತ್ತಿತ್ತು. ಈಗ ಮೂರರಿಂದ ನಾಲ್ಕು ದಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ಮಾಡಿ ಬಂಕ್ ಬಂದ್ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಬಹುಶ: ವಾರದ ಬಳಿಕ ನಾವು ಬಂಕ್ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.
ರೈತರಿಗೆ ನೆರವಾಗಲು ಆಗ್ರಹ
ಟಿಲ್ಲರ್ ಅಥವಾ ಟ್ರಾೃಕ್ಟರ್‌ನಲ್ಲಿ ಉಳುಮೆ ಮೊದಲಾದ ಕೃಷಿ ಕೆಲಸ ಮಾಡುವವರು ಜಮೀನಿನಿಂದ ಜಮೀನಿಗೆ ಹೋಗುತ್ತಾರೆ. ಮಾರ್ಗಮಧ್ಯೆ ಡೀಸೆಲ್ ಖಾಲಿಯಾದರೆ ಅವರು ಚಾಲಕ ಮಾಲೀಕರಿಗೆ ಕರೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಬರಲು ಬಂಕ್‌ಗೆ ಹೋದರೆ ಇಂಧನ ಕೊಡುವುದಿಲ್ಲ. ದಾರಿಯಲ್ಲೇ ನಿಂತ ಟ್ರಾೃಕ್ಟರ್ ಅನ್ನು ತರುವುದಾದರೂ ಹೇಗೆ? ಸರ್ಕಾರ ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೃಷಿ ಕೆಲಸಗಳಿಗೂ ತೊಂದರೆ ನೀಡಿದರೆ ಹೇಗೆ ಎಂದು ರೈತರು ಪ್ರಶ್ನಿಸಿದ್ದಾರೆ.
ಇಂಧನ ಸರಬರಾಜು ಪ್ರಕ್ರಿಯೆಯಲ್ಲಿ ಭಾರಿ ತೊಂದರೆಯಾಗುತ್ತಿದೆ. ಪರಿಸ್ಥಿತಿ ಮೊದಲಿನ ಹಾಗೆ ಸಹಜ ಸ್ಥಿತಿಗೆ ಬರಬೇಕೆಂದರೆ ಸಮಯ ಬೇಕಾಗುತ್ತದೆ. ಜಿಲ್ಲಾಧಿಕಾರಿ ನಿರ್ದೇಶನ ಹಿನ್ನೆಲೆಯಲ್ಲಿ ಕ್ಯಾನ್‌ಗಳಿಗೆ ಇಂಧನ ಕೊಡುತ್ತಿಲ್ಲ. ಹೀಗಾಗಿ ಸಾರ್ವಜನಿಕರು ವಾಗ್ವಾದ ಮಾಡುತ್ತಾರೆ.
ಉಮೇಶ್
ಪೆಟ್ರೋಲ್ ಬಂಕ್ ಮಾಲೀಕ ಹಾಸನ
ಸದ್ಯದವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಇಂಧನ ಸಮಸ್ಯೆ ಉದ್ಭವಿಸಿಲ್ಲ. ಜನರು ಅನಗತ್ಯ ಇಂಧನ ಶೇಖರಣೆ ಮಾಡದಂತೆ ಹಾಗೂ ಕೃತಕ ಅಭಾವ ಸೃಷ್ಠಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್, ಬ್ಯಾರೆಲ್‌ಗಳಿಗೆ ಇಂಧನ ತುಂಬಿಸದಂತೆ ನಿರ್ದೇಶನ ನೀಡಲಾಗಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಕೆ.ಎಸ್.ಲತಾಕುಮಾರಿ
ಜಿಲ್ಲಾಧಿಕಾರಿ