- ಠೇವಣಿ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ
- 5 ಕೋಟಿ ರೂ.ಗೂ ಅಧಿಕ ಹಣದೊಂದಿಗೆ ಖಾಸಗಿ ಬ್ಯಾಂಕ್ ಮ್ಯಾನೇಜರ್ ಪರಾರಿ
ಹಾಸನ: ನಿಗದಿತ ಠೇವಣಿ ಮೇಲೆ ಸಾಲ ಕೊಡಿಸುವುದಾಗಿ ಹೇಳಿ 200ಕ್ಕೂ ಅಧಿಕ ಗ್ರಾಹಕರಿಂದ 5 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವ ಆರೋಪ ನಗರದ ಖಾಸಗಿ ಬ್ಯಾಂಕ್ ವಿರುದ್ಧ ಕೇಳಿಬಂದಿದೆ.
ತಣ್ಣೀರುಹಳ್ಳದಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಬ್ಯಾಂಕ್ ಮ್ಯಾನೇಜರ್ ಎಚ್.ಎಸ್.ಪೂಜಾ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಅವರಿಗೆ ಗ್ರಾಹಕರು ದೂರು ನೀಡಿದ್ದಾರೆ. ಗ್ರಾಹಕರಿಗೆ ಎಫ್‌ಡಿ ಇಡುವಂತೆ ಹೇಳಿ ಕೋಟ್ಯಂತರ ರೂ. ಸಂಗ್ರಹ ಮಾಡಿದ ಮ್ಯಾನೇಜರ್ ನಂತರ ನಗದು ಸಮೇತ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಾಖಲೆ ನೀಡಿಲ್ಲ: ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ 25 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೂ ಸಾಲ ಕೊಡಿಸುವ ಆಮಿಷವನ್ನು ಪೂಜಾ ಗ್ರಾಹಕರಿಗೆ ನೀಡಿದ್ದರು. 25 ಲಕ್ಷ ರೂ. ಲೋನ್ ಪಡೆದರೆ ಅದಕ್ಕೆ 10 ಲಕ್ಷ ರೂ.ಸಬ್ಸಿಡಿ ನೀಡುವುದಾಗಿಯೂ ನಂಬಿಸಿದ್ದಾರೆ. ಇದಕ್ಕೆ ಮಾರುಹೋದ ಜನರು ಎಫ್‌ಡಿ ಮಾಡಿದ್ದರು. ಕೆಲವರು ಪೂಜಾ ಅವರ ಖಾತೆಗೆ ಜಮಾ ಮಾಡಿದ್ದರು. ಆದರೆ ಗ್ರಾಹಕರು ನೀಡಿರುವ ಹಣಕ್ಕೆ ಯಾವುದೇ ದಾಖಲೆಯನ್ನು ಮ್ಯಾನೇಜರ್ ನೀಡಿರಲಿಲ್ಲ. ಇತ್ತೀಚೆಗೆ ಗ್ರಾಹಕರು ಹಣ ವಾಪಸ್ ಕೇಳಲು ಆರಂಭಿಸಿದಾಗ ಕೆಲವರಿಗೆ ಚೆಕ್ ನೀಡಿದ ಪೂಜಾ ಇದೀಗ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
ವಿದೇಶಕ್ಕೆ ಪರಾರಿಯಾಗಲು ಯತ್ನ: ಆರೋಪಿ ಎಚ್.ಎಸ್.ಪೂಜಾ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ದುಬೈಗೆ ಹಾರಲು ಅವರು ಯತ್ನಿಸುತ್ತಿರುವ ಮಾಹಿತಿ ಇದ್ದು, ಅವರು ಪರಾರಿಯಾಗಲು ಯಾವುದೇ ಕಾರಣಕ್ಕೂ ಬಿಡಬಾರದು. ಅವರ ಪಾಸ್‌ಪೋರ್ಟ್ ರದ್ದು ಮಾಡಿ ವಿದೇಶ ಪ್ರಯಾಣವನ್ನು ತಡೆಯಬೇಕು. ಆಕೆಯನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಗ್ರಾಹಕರು ಪೆನ್ಷಷನ್ ಮೊಹಲ್ಲಾ ಠಾಣೆ ಮುಂದೆ ಶುಕ್ರವಾರ ರಾತ್ರಿ ಜಮಾಯಿಸಿ ಮ್ಯಾನೇಜರ್ ಪೂಜಾ ಬಂಧನಕ್ಕೆ ಆಗ್ರಹಿಸಿದರು.
ನಗರದ ಪೆನ್ಷಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.