ಚಿಂದೆನಹಳ್ಳಿ ಗಡಿ ಕೆಪಿಎಸ್ (ಪ್ರಾಥಮಿಕ ಶಾಲಾ ವಿಭಾಗ)ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಗಣ್ಯರು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಗೋಪಾಲ್, ನಟೇಶ್, ಹರೀಶ್ ಇತರರು ಇದ್ದರು.
- ಶಾಲಾ ವಾರ್ಷಿಕೋತ್ಸವ
- ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಕಿವಿಮಾತು
ಗಂಡಸಿ : ಕಲಿಕಾ ಸಮಯದಲ್ಲಿ ವಿದ್ಯಾರ್ಥಿಯು ಕೀಳರಿಮೆ ಮತ್ತು ಬಡತನವೆಂಬ ಭಾವನೆಗಳನ್ನು ಬದಿಗೊತ್ತಿ ನಿರಂತರವಾಗಿ ವಿದ್ಯಾಭ್ಯಾಸದ ಕಡೆ ಪರಿಶ್ರಮ ಹಾಕಿದಲ್ಲಿ ಪ್ರತಿಫಲ ದೊರೆಯುವುದರಲ್ಲಿ ಸಂಶಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.
ಹೋಬಳಿಯ ಚಿಂದೆನಹಳ್ಳಿ ಕೆಪಿಎಸ್ (ಪ್ರಾಥಮಿಕ ಶಾಲಾ ವಿಭಾಗ ) ನಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ತನ್ನ ಗುರಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಯಾವುದೇ ರೀತಿಯ ಸವಾಲುಗಳನ್ನು ಸರಳವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜತೆಗೆ ಮಹಾನ್ ನಾಯಕರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅರಸೀಕೆರೆ ತಾಲೂಕಿನಲ್ಲೇ ಕೆಪಿಎಸ್ ಶಾಲೆ ಪ್ರಥಮವಾಗಿ ಚಿಂದೆನಹಳ್ಳಿ ಗಡಿಯಲ್ಲಿ ಪ್ರಾರಂಭವಾಗಿದ್ದು, 350 ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆಯನ್ನು 500ಕ್ಕೆ ಏರಿಸುವ ಗುರಿ ಹೊಂದಿದ್ದು, ಈ ಸವಾಲಿಗೆ ಪಾಲಕರು, ಸ್ಥಳೀಯ ಸಂಘ ಸಂಸ್ಥೆಗಳು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ್, ಕೆಪಿಎಸ್ ಕಾಲೇಜು ವಿಭಾಗದ ಪ್ರಾಂಶುಪಾಲರಾದ ನಟೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಸನ್ನ, ಮುಖ್ಯ ಶಿಕ್ಷಕ ಬಸವರಾಜ್, ಶಿಕ್ಷಕರು ಇದ್ದರು.