ರಮೇಶ್ ಸುವರ್ಣ, ಕಾಫಿ ಬೆಳೆಗಾರ ಚೀಕನಹಳ್ಳಿ ಬಂಡೆ ಬೇಲೂರು ತಾಲೂಕು  
ಹಾಸನ

ಮಕ್ಕಳ ಭವಿಷ್ಯದೊಂದಿಗೆ ಅರಣ್ಯ ಇಲಾಖೆ, ಜಿಲ್ಲಾಡಳಿತ ಚೆಲ್ಲಾಟ

ಪ್ರಮುಖ ಮುಖ್ಯಾಂಶಗಳು

  • ಮಲೆನಾಡು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳ
  • ಶಾಲೆಗಳಿಗೆ ತೆರಳುವ ಬಡ ವಿದ್ಯಾರ್ಥಿಗಳು ಮನೆಯಲ್ಲುಳಿಯುವಂತಾಗಿದ್ದರೂ
ಬೇಲೂರು: ಮಲೆನಾಡು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳ ಹೆಚ್ಚಾದ ಕಾರಣ ಶಾಲೆಗಳಿಗೆ ತೆರಳುವ ಬಡ ವಿದ್ಯಾರ್ಥಿಗಳು ಮನೆಯಲ್ಲುಳಿಯುವಂತಾಗಿದ್ದರೂ ವಾಹನ ವ್ಯವಸ್ಥೆ ಮಾಡದೆ ಮಕ್ಕಳ ಭವಿಷ್ಯದ ಜತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದೆ ಎಂದು ಚೀಕನಹಳ್ಳಿ ಬಂಡೆ ಗ್ರಾಮದ ಕಾಫಿ ಬೆಳೆಗಾರ ರಮೇಶ್ ಸುವರ್ಣ ಕಿಡಿಕಾರಿದ್ದಾರೆ.
ಮಲೆನಾಡು ಬಾಗದಲ್ಲಿ ಕಾಡಾನೆಗಳ ದಿನನಿತ್ಯದ ಉಪಟಳದಿಂದ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಕಾಡಾನೆಗಳ ಹಿಂಡು ಗ್ರಾಮಗಳ ಸಮೀಪದಲ್ಲೇ ಬೀಡು ಬಿಟ್ಟಿದ್ದು, ಮಕ್ಕಳು ಮನೆಯಲ್ಲೆ ಉಳಿಯುವಂತಾಗಿದೆ. ಬಡ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಕಾಡಾನೆಗಳಿರುವ ಗ್ರಾಮಗಳಿಗೆ ಬಸ್ ಅಥವಾ ಯಾವುದಾದರೂ ವಾಹನವನ್ನು ಅರಣ್ಯ ಇಲಾಖೆ ಅಥವಾ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದರೆ ಒಳಿತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆನೆಗಳಿಂದ ಮತ್ತೆ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಿ ಆನೆಗಳನ್ನು ದೂರದ ಕಾಡಿಗೆ ಓಡಿಸುವುದಕ್ಕೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರೊಂದಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.