ಬೇಲೂರು: ವಿಶ್ವ ಪಾರಂಪರಿಕ ತಾಣ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಅಮೆರಿಕಾ, ಇಟಲಿ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ರೋಟರಿ ಗಣ್ಯರು ಮಂಗಳವಾರ ಭೇಟಿ ನೀಡಿ ಶಿಲ್ಪಕಲಾ ವೈಭವವನ್ನು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದರು.
ರೋಟರಿ ಪ್ರಾಜೆಕ್ಟ್ ಫೇರ್-2026ರ ಅಂಗವಾಗಿ ಭಾರತ ಪ್ರವಾಸ ಕೈಗೊಂಡಿರುವ ವಿವಿಧ ದೇಶಗಳ ರೋಟರಿ ಪ್ರತಿನಿಧಿಗಳು ಬೆಂಗಳೂರಿನಲ್ಲಿ ವಿವಿಧ ರೋಟರಿ ಸೇವಾ ಯೋಜನೆಗಳನ್ನು ವೀಕ್ಷಿಸಿ ಬಳಿಕ ಹಾಸನ ಜಿಲ್ಲೆಗೆ ಆಗಮಿಸಿ ಬೇಲೂರು-ಹಳೇಬೀಡಿನ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಬೇಲೂರು ರೋಟರಿ ಕ್ಲಬ್ನಿಂದ ವಿದೇಶಿ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ರೋಟರಿ ಸಂಪ್ರದಾಯದಂತೆ ಫ್ಲ್ಯಾಗ್ ವಿನಿಮಯ ಮಾಡಿಕೊಂಡರು.
ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣಗೊಂಡಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯವು ತನ್ನ ಅಪೂರ್ವ ಶಿಲ್ಪಕಲೆ ಮತ್ತು ವಾಸ್ತು ವೈಭವದಿಂದ ವಿಶ್ವದ ಗಮನ ಸೆಳೆದಿದೆ. ದೇವಾಲಯದ ಪ್ರತಿಯೊಂದು ಕಲ್ಲಿನಲ್ಲೂ ಕಲಾವಿದರ ಅದ್ಭುತ ಕಲಾ ನೈಪುಣ್ಯತೆ ಅನಾವರಣಗೊಂಡಿರುವುದನ್ನು ಕಂಡ ವಿದೇಶಿಗರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜ್, ಚನ್ನಕೇಶವಸ್ವಾಮಿ ದೇವಾಲಯದ ಐತಿಹಾಸಿಕ ಹಿನ್ನೆಲೆ, ವಾಸ್ತುಶಿಲ್ಪಗಳ ಕುರಿತು ವಿದೇಶಿ ಅತಿಥಿಗಳಿಗೆ ಮಾಹಿತಿ ನೀಡಿದರು.
ತಂಡದಲ್ಲಿ ಪಿಡಿಜಿ ವೆನು ರಾವ್, ಪಿಡಿಜಿ ಡೇವಿಡ್ ಎಸ್. ಫೆಲ್ಲರ್, ಪಿಡಿಜಿ ಸ್ಟೀವ್ ಪುಡರ್ಬಾಗ್ ಹಾಗೂ ಡೆಬ್ರಾ, ಪಿಡಿಜಿ ರಾಂಡೆಲ್ ಬಾರ್ಕ್ಲೇ, ಪಿಡಿಜಿ ಪೀಟರ್ ಕಾರ್ಲ್ ಜಾನ್ಸನ್, ಪಿಡಿಜಿ ಕ್ಯಾರೋಲಿನ್ ಜಾನ್ಸನ್, ಡಯಾನ್ನೆ ಬಾರ್ಕ್ಲೇ, ಜೋನಿ ಕ್ರಿಸ್ ಪ್ಲಾಂಟೆ ಹಾಗೂ ಇಟಲಿಯ ರೋಟರಿ ಪ್ರತಿನಿಧಿ ಅರಿಯಾನ್ನಾ ಬೆಲ್ಫಿಯೋರ್ ಇತರರು ತಂಡದಲ್ಲಿದ್ದರು.
ಬೆಂಗಳೂರಿನ ಪಿಡಿಜಿ ಅನಂತ್, ಹಾಸನದ ಮಾಜಿ ಸಹಾಯಕ ಪ್ರಾಂತಪಾಲ ಮೊಹನ್, ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜ್, ಸಹಾಯಕ ಪ್ರಾಂತಪಾಲ ಡಾ.ಗಣೇಶ್, ಕಾರ್ಯದರ್ಶಿ ರಾಘವೇಂದ್ರ ಇತರರು ವಿದೇಶಿ ಅತಿಥಿಗಳನ್ನು ಸತ್ಕರಿಸಿದರು.