ಹಾಸನ ನಗರದ ಬಿ.ಎಂ.ರಸ್ತೆಯಲ್ಲಿ ಅನಧಿಕೃತ ಶೆಡ್‌ಗಳನ್ನು ಸೋಮವಾರ ಪಾಲಿಕೆವತಿಯಿಂದ ತೆರವುಗೊಳಿಸಲಾಯಿತು. ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಹಾಜರಿದ್ದರು.  
ಹಾಸನ

ಹಾಸನದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಹಾಸನದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ
  • ಅನಧಿಕೃತ ಅಂಗಡಿ, ಮುಂಗಟ್ಟು ತೆರವು
  • ಮಹಾನಗರ ಪಾಲಿಕೆ ದಿಟ್ಟ ಕ್ರಮ
ಹಾಸನ: ನಗರದ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಗೊಳಿಸುವ ಉದ್ದೇಶ ದಿಂದ ಹಾಸನ ಮಹಾನಗರ ಪಾಲಿಕೆ ವಿವಿಧ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರವೂ ಮುಂದುವರಿದಿತ್ತು.
ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಬಿ.ಎಂ. ರಸ್ತೆ ಉದ್ದಕ್ಕೂ ಫುಟ್‌ಪಾತ್ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳು, ತಾತ್ಕಾಲಿಕ ವ್ಯಾಪಾರ ಮಳಿಗೆಗಳು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ ವಿವಿಧ ವಸ್ತುಗಳು ಹಾಗೂ ರಾಜಕೀಯ ಪಕ್ಷಗಳ ಕಟೌಟ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.
ಸೋಮವಾರ ಬೆಳಗ್ಗಿನಿಂದಲೇ ಕಾರ್ಯಾಚರಣೆಗಿಳಿದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ರಸ್ತೆ ಬದಿಯ ಒತ್ತುವರಿಗಳನ್ನು ತೆರವುಗೊಳಿಸಿದರು. ಕಾರ್ಯಾಚರಣೆ ವೇಳೆ ಕೆಲ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೂ, ಅಧಿಕಾರಿಗಳು ನಿಯಮಾನುಸಾರ ಕ್ರಮ ಮುಂದುವರಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪಾಲಿಕೆ ಸೂಪರ್‌ವೈಸರ್ ಪರಶುರಾಮು ಈ ಸಂದರ್ಭ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಸಾರ್ವಜನಿಕ ರಸ್ತೆ ಹಾಗೂ ಫುಟ್ ಪಾತ್‌ಗಳ ಮೇಲಿನ ಎಲ್ಲ ರೀತಿಯ ಅನಧಿಕೃತ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದರು. ಪಾದಚಾರಿಗಳಿಗೆ ಮೀಸಲಾದ ಫುಟ್‌ಪಾತ್‌ಗಳನ್ನು ವ್ಯಾಪಾರಕ್ಕಾಗಿ ಬಳಸುವುದರಿಂದ ಜನರು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸೂಚನೆ ನೀಡಲಾಗಿತ್ತು:
ಕಳೆದ 15 ದಿನಗಳ ಹಿಂದೆಯೇ ಫುಟ್‌ಪಾತ್ ಆಕ್ರಮಿಸಿಕೊಂಡಿದ್ದ ಗೂಡಂಗಡಿ ಹಾಗೂ ಅಂಗಡಿ ಮಾಲೀಕರಿಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೂ ತೆರವುಗೊಳಿಸದ ಕಾರಣ ಇದೀಗ ಜೆಸಿಬಿ ಮೂಲಕ ಪಾಲಿಕೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪಾಲಿಕೆ ಸೂಪರ್‌ವೈಸರ್ ಪರಶುರಾಮು ವಿವರಿಸಿದರು.
ಕಾರ್ಯಾಚರಣೆ ಕೇವಲ ಸಣ್ಣ ವ್ಯಾಪಾರಿಗಳಿಗಷ್ಟೇ ಸೀಮಿತವಾಗಿಲ್ಲ. ನಗರದ ಕೆಲ ಪ್ರಮುಖ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಹಾಗೂ ಜಾಹೀರಾತು ಫಲಕಗಳೂ ಫುಟ್‌ಪಾತ್ ವ್ಯಾಪ್ತಿಗೆ ಅತಿ ಕ್ರಮಣ ಮಾಡಿರುವುದು ಕಂಡುಬಂದಿದೆ.ನಗರದ ಪ್ರತಿಷ್ಠಿತ ಅಂಗಡಿ, ಮಳಿಗೆಗಳಿಗೂ ನಿಯಮ ಉಲ್ಲಂಘನೆ ಆರೋಪದಡಿ ಮಾಹಿತಿ ನೀಡಲಾಗಿದೆ. ಸ್ಪಂದಿಸದೇ ಇದ್ದರೆ ಅನಧಿಕೃತ ನಾಮಫಲಕಗಳನ್ನೂ ಶೀಘ್ರ ತೆರವುಗೊಳಿಸಲಾಗುವುದು ಎಂದರು.
ಈ ವಿಚಾರದಲ್ಲಿ ಯಾವುದೇ ಜನ ಪ್ರತಿನಿಧಿ, ರಾಜಕೀಯ ಮುಖಂಡ ಅಥವಾ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿಯುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಪಾಲನೆಯೇ ನಮ್ಮ ಆದ್ಯತೆ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಲಿದೆ ಎಂದು ಪರಶುರಾಮು ಹೇಳಿದರು.
ನಗರದ ಪ್ರಮುಖ ರಸ್ತೆಗಳ ಒತ್ತುವರಿಯಿಂದ ವಾಹನ ಸಂಚಾರ ದಟ್ಟಣೆ, ಪಾದಚಾರಿಗಳ ಓಡಾಟಕ್ಕೆ ತೊಂದರೆ, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಅಡ್ಡಿ ಸೇರಿ ಹಲವು ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ತೆರವು ಕಾರ್ಯಾಚರಣೆ ಮುಂದುವರಿಸಲು ಪಾಲಿಕೆ ನಿರ್ಧರಿಸಿದೆ ಎಂದವರು ಹೇಳಿದರು.