ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅಧಿಕಾರಿಗಳ ಜತೆ ಸಭೆ ನಡೆಸಿದರು. ಡಿಸಿ ಲತಾಕುಮಾರಿ, ಸಿಇಒ ಪೂರ್ಣಿಮಾ ಇತರ ಅಧಿಕಾರಿಗಳು ಇದ್ದರು.
- ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಪದಾರ್ಥ
- 210 ನ್ಯಾಯಬೆಲೆ ಅಂಗಡಿಗಳು ತೆರೆಯಲು ತೀರ್ಮಾನ
- ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ
ಹಾಸನ: ಜಿಲ್ಲೆಯಲ್ಲಿ 5 ಲಕ್ಷ 64 ಸಾವಿರ ಬಿಪಿಎಲ್ ಕಾರ್ಡ್‌ಗಳಿದ್ದು, ಅದರಲ್ಲಿ ಶೇ.82ರಷ್ಟು ಕಾರ್ಡ್‌ಗಳಿಗೆ ನಿಯಮಿತವಾಗಿ ದವಸ-ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿ ಸದಸ್ಯರಿಗೆ ಐದು ಕೆಜಿ ಅಕ್ಕಿ ನೀಡುತ್ತಿದ್ದರೆ, ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುತ್ತಿದೆ. ಈ ಮೂಲಕ ಪ್ರತಿ ಫಲಾನುಭವಿಗೆ ಒಟ್ಟು ಹತ್ತು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಹೊಸದಾಗಿ 210 ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದ್ದು, ಜನರಿಗೆ ಸಮೀಪದಲ್ಲೇ ಆಹಾರ ಧಾನ್ಯ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನ ಸುವಿಧಾ ಯೋಜನೆ ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ 15 ಸಾವಿರ ಕಾರ್ಡ್‌ಗಳು ಒಳಗೊಂಡಿದ್ದು, ಪ್ರಥಮ ಹಂತದಲ್ಲಿ ಎರಡು ಸಾವಿರ ಕಾರ್ಡ್‌ಗಳಿಗೆ ಯೋಜನೆಯ ಪ್ರಯೋಜನ ನೀಡಲಾಗುತ್ತದೆ. 75 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ. ಕೇಂದ್ರ ಸರ್ಕಾರದ ಪ್ರಕಾರ ಏಳು ಲಕ್ಷ ಎಪಿಎಲ್ ಕಾರ್ಡ್‌ಗಳಿಗೆ ಅರ್ಹರಾಗ ಬೇಕಾದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಗಿದ್ದು, ಹಾಸನ ಜಿಲ್ಲೆಯಲ್ಲಿ 22,392 ಕಾರ್ಡ್‌ಗಳ ಪರಿಶೀಲನೆ ಮತ್ತು ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ರಾಗಿ ಖರೀದಿ ಕೇಂದ್ರ ಆರಂಭ: ಹಾಸನ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷ 10 ಸಾವಿರ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡುವ ಗುರಿ ಇಡಲಾಗಿದೆ. ಈಗಾಗಲೇ 44,258 ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 80 ಶೇಕಡ ರೈತರು ರಾಗಿ ಮಾರಾಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಉತ್ತಮ ಗುಣಮಟ್ಟದ ರಾಗಿ ನೀಡುವಂತೆ ರೈತರಿಗೆ ಸಚಿವರು ಮನವಿ ಮಾಡಿದರು.
ಇಂದಿರಾ ಫುಡ್‌ಕಿಟ್ ವಿತರಣೆ : ಇಂದಿರಾ ಕಿಟ್ ನೀಡುವುದರಿಂದ ಪೌಷ್ಟಿಕ ಆಹಾರ ಒದಗಿಸಿದಂತಾಗುತ್ತದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ವಿತರಣೆ ಪ್ರಾರಂಭವಾಗಲಿದೆ. ರಾಜ್ಯ ಮಟ್ಟದಲ್ಲಿ ಒಟ್ಟು 1 ಕೋಟಿ 25 ಲಕ್ಷ ಫುಡ್ ಕಿಟ್‌ಗಳನ್ನು ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಹಾಗೂ ವಿವಿಧ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಅರ್ಹರಿಗೆ ಶೀಘ್ರದಲ್ಲೇ ಬಿಪಿಎಲ್ ಕಾರ್ಡ್ ವಿತರಣೆ
ಹಾಸನ: ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆ ಹಾಗೂ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕುರಿತು ಸರ್ಕಾರ ಕ್ರಮ ಕೈಗೊಂಡಿದ್ದು, ಅರ್ಹರಿಗೆ ಆದಷ್ಟು ಬೇಗ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರರಿಂದ ನಾಲ್ಕು ಲಕ್ಷ ಹೊಸ ರೇಷನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಇನ್ನೂ ಹಲವರು ಬಿಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದು, ಅವುಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಒಂದೇ ಕುಟುಂಬದಲ್ಲಿ ತಾಯಿ-ತಂದೆ ಮತ್ತು ಮಗ-ಸೊಸೆ ಪ್ರತ್ಯೇಕವಾಗಿ ವಾಸಿಸುವ ಸಂದರ್ಭಗಳಲ್ಲಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದು, ಈ ಸಂಬಂಧ ಸ್ಪಷ್ಟ ಮಾನದಂಡ ರೂಪಿಸಲಾಗಿದೆ ಎಂದು ತಿಳಿಸಿದರು.
ಪ್ರತ್ಯೇಕವಾಗಿ ವಾಸವಿದ್ದು ಸ್ವಂತ ಮನೆ ಹೊಂದಿರುವವರು ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದರೆ 15 ದಿನಗಳೊಳಗೆ ರೇಷನ್ ಕಾರ್ಡ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಪಿಎಲ್, ಎಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಪ್ರಕ್ರಿಯೆ ತಕ್ಷಣ ಪೂರ್ಣಗೊಳ್ಳುವುದಿಲ್ಲ. ಆದರೂ ಅರ್ಹ ಬಿಪಿಎಲ್ ಕುಟುಂಬಗಳಿಗೆ ಆದ್ಯತೆ ನೀಡಲಾಗುವುದು ಎಂದರು.