ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯಿಂದ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಚಾಲನೆ ನೀಡಿದರು. ಪಿಐ ರೇವಣ್ಣ, ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್ ಇತರರಿದ್ದರು
- ಸಾರ್ವಜನಿಕರಲ್ಲಿ ಜಾಗೃತಿ
- ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಕಿವಿಮಾತು
ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬೀದಿ ನಾಟಕ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾಕ್ಕೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಚಾಲನೆ ನೀಡಿದರು.
ರಸ್ತೆ ಸುರಕ್ಷತಾ ಸಪ್ತಾಹ ಜಾಥಾವು ವಿಶ್ವ ಹಾಗೂ ಬಿಜಿಎಸ್ ಕಾಲೇಜುಗಳ ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಪೊಲೀಸ್ ಸಿಬ್ಬಂದಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಮಾತನಾಡಿ, ಸರ್ಕಾರ ರಸ್ತೆ ಸುರಕ್ಷತಾ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಬುದ್ಧಿವಂತರೆ ಹೆಚ್ಚು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕಷ್ಟದ ಸಂದರ್ಭ ಅವರ ಸುರಕ್ಷತೆಗೆ ಪೊಲೀಸರ ಅವಶ್ಯಕತೆ ಬೇಕು. ಆದರೆ ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ಹಾಕಿದರೆ ಅವರ ವಿರುದ್ಧವೇ ತಿರುಗಿ ನಿಲ್ಲುವುದು ಎಷ್ಟು ಸರಿ? ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ವಾಹನ ಓಡಿಸುತ್ತಾ ಮೊಬೈಲ್‌ನಲ್ಲಿ ಮಾತನಾಡುವುದು ಅಪರಾಧ ಮತ್ತು ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡುವುದು ತಪ್ಪು. ಈಗಾಗಲೇ ಸಾಕಷ್ಟು ಜನರು 25 ಸಾವಿರ ರೂ. ದಂಡ ಕಟ್ಟಿರುವ ನಿದರ್ಶನಗಳಿವೆ. ಆಟೋ ಚಾಲಕರು, ದ್ವಿಚಕ್ರ ವಾಹನಗಳ ಸವಾರರು ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಪ್ರತಿಯೊಬ್ಬರೂ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.
ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. ತಾಲೂಕಿನಲ್ಲಿ ಕಳೆದ 5 ವರ್ಷಗಳ ಈಚೆಗೆ 91 ಅಪಘಾತವಾಗಿದ್ದು, 370 ಪ್ರಕರಣ ದಾಖಲಾಗಿದೆ. ಇದರಲ್ಲಿ 93 ಜನ ಸಾವನ್ನಪ್ಪಿದ್ದರೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಬಿಜಿಎಸ್ ಪ್ರಾಂಶುಪಾಲ ದಿವ್ಯ ಕುಮಾರ್, ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್, ಶಂಕರಪ್ಪ ಪೊಲೀಸ್ ಇಲಾಖೆ ಸಿಬ್ಬಂದಿ, ಆಟೋ ಚಾಲಕರ ಸಂಘದ ದೀಪು ಇತರರು ಇದ್ದರು.
ಪತ್ರಕರ್ತ ಮಹೇಶ್‌ಗೌಡ ಯಮನ ಪಾತ್ರದಲ್ಲಿ ಹಾಗೂ ಚಿತ್ರಗುಪ್ತನ ಪಾತ್ರದಲ್ಲಿ ಎಎಸ್‌ಐ ಸೋಮಶೇಖರ್ ವಿಶೇಷವಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.