ಹೊಳೆನರಸೀಪುರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಉದ್ಘಾಟಿಸಿದರು. ಚೇತನಾ, ಐಶ್ವರ್ಯಾ ಗುಡದಿನ್ನಿ, ಎಂ.ವಿ.ಶಿವಕುಮಾರ್ ಇತರರು ಇದ್ದರು.
- ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಸಲಹೆ
ಹೊಳೆನರಸೀಪುರ: ಡಾ. ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನ ರಚಿಸಿ ಅತ್ಯಮೂಲ್ಯವಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಪೀಠಿಕೆಯಲ್ಲಿ ತಿಳಿಸಿರುವ ಎಲ್ಲ ಅಂಶಗಳನ್ನು ಪಾಲನೆ ಮಾಡಿದರೆ ಉತ್ತಮ ಸಮಾಜ ರೂಪಿಸುವ ಒಳ್ಳೆಯ ಕಾರ್ಯವನ್ನು ಮಾಡಬಹುದೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲೂಕು ವಕೀಲರ ಸಂಘ ಆಯೋಜನೆ ಮಾಡಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಜ್ಞಾನಿ ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನಮ್ಮ ಹಕ್ಕುಗಳನ್ನು ತಿಳಿಸಿ ಕೊಡುವ ಜತೆಗೆ ನಮ್ಮ ಆದ್ಯ ಕರ್ತವ್ಯವನ್ನೂ ಎಚ್ಚರಿಕೆಯಿಂದ ತಿಳಿಸಿಕೊಟ್ಟಿದ್ದಾರೆ. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವಾಗಿದೆ. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ನಮ್ಮ ಮೇಲಿರುವ ಗುರುತರ ಜವಾಬ್ದಾರಿಯನ್ನು ಉಳಿಸಿಕೊಂಡು, ಬಳಸಿಕೊಂಡು ಉತ್ತಮ ಜೀವನ ನಡೆಸೋಣವೆಂದು ತಿಳಿಸಿದರು.
ಶಿಕ್ಷಕ ಪರಮೇಶ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಸ್ಪಶ್ಯತೆ, ಬಡತನ, ಜಾತೀಯತೆ, ಕತ್ತಲೆಯಿಂದ ಕೂಡಿದ ಬದುಕಿನ ಜತೆಗೆ ಬಹಳ ಕಷ್ಟಕರವಾದ ಜೀವನವನ್ನು ಮೆಟ್ಟಿ ನಿಂತು ಸಮಾಜವನ್ನು ಬೆಳಕಿನೆಡೆಗೆ ಕೊಂಡ್ಯೊಯುವ ಕಾರ್ಯ ಮಾಡಿದ ಮಹಾ ಪುರುಷರು. ಎದುರಿಸಿದ ಕಷ್ಟಕರ ಜೀವನವನ್ನು ಮರೆತು ತಮ್ಮದೇ ದೃಢ ನಿರ್ಧಾರ ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಗ್ರಂಥವಾದ ಸಂವಿಧಾನ ರಚಿಸಿದ ಮಹಾನ್ ಪುರುಷರು. ಡಾ. ಬಿ.ಆರ್.ಅಂಬೇಡ್ಕರ್ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ದೇಶದ ಸರ್ವತೋನ್ಮುಖ ಅಭಿವೃದ್ಧಿಗೆ ಹಾಗೂ ಒಂದು ಸುಭದ್ರವಾದ ಕಾನೂನು ಅಥವಾ ನಿಯಮ ರೂಪಿಸಿಕೊಟ್ಟಿದ್ದಾರೆ. ಅವರು ನೀಡಿದ ಪೀಠಿಕೆ, ವಿಚಾರಧಾರೆಗಳು, ಆದರ್ಶಗಳು ಹಾಗೂ ನಿಯಮಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕರೆಕೊಟ್ಟರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಸುನೀಲ್ ಕುಮಾರ್, ವಕೀಲ ಜಯಪ್ರಕಾಶ್ ಮಾತನಾಡಿದರು. ನ್ಯಾಯಾಲಯದ ನೌಕರ ಗಂಗಾಧರಪ್ಪ ಪ್ರಾರ್ಥಿಸಿದರು, ಶ್ವೇತಾ ಪ್ರಕಾಶ್ ಸ್ವಾಗತಿಸಿದರು ಹಾಗೂ ಡಿ.ಶಿವಮೂರ್ತಿ ನಿರೂಪಿಸಿದರು.
ಸಿವಿಲ್ ನ್ಯಾಯಾಧೀಶೆ ಚೇತನಾ, ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯಾ ಗುಡದಿನ್ನಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಸುರೇಶ್ ಜಿ.ಎಸ್. ಹಾಗೂ ಶಿವಮ್ಮ, ವಕೀಲರಾದ ಬಿ.ಎನ್.ಕೃಷ್ಣಮೂರ್ತಿ, ಸಿ.ಎಂ.ಅಶೋಕ್, ಸತೀಶ್ ಯು.ಆರ್., ಪ್ರಕಾಶ್, ಮೈತ್ರಿ ಕೆ.ಎನ್., ಮಂಜುನಾಥ್, ಆಶಾಕುಮಾರಿ, ಆಶಾರಾಣಿ, ಸಂಗೀತ, ರಾಣಿ, ಜ್ಯೋತಿ, ಅನುಷಾ, ರಾಮಪ್ರಸಾದ್, ವಿಜಯಾನಂದ, ಸಂತೋಷ್, ತಮ್ಮಯ್ಯ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಕೃಷ್ಣಮೂರ್ತಿ, ಪುನೀತ್, ಪ್ರಶಾಂತ್, ಕೃಷ್ಣೇಗೌಡ, ಇತರರು ಇದ್ದರು.