ಎಸ್‌ಆರ್‌ಎಸ್ ಪ್ರಜ್ಞ್ಞಾ ವಿದ್ಯಾಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜನಪದ ದಿನಾಚರಣೆ ಮತ್ತು ಜನಪದ ವೈಭವ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎನ್.ಬಲರಾಮ ಉದ್ಘಾಟಿಸಿದರು. ಡಾ.ಹಂಪನಹಳ್ಳಿ ತಿಮ್ಮೇಗೌಡ ಇತರರಿದ್ದರು.
- ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎನ್.ಬಲರಾಮ
ಹಾಸನ: ಜನಪದ ಕಲೆ, ಸಾಹಿತ್ಯದಲ್ಲಿ ನಾಡಿನ ಸಂಸ್ಕೃತಿ ಪರಂಪರೆ ಹಾಸುಹೊಕ್ಕಿದೆ. ಹೀಗಾಗಿ ದೇಸಿ ಸೊಗಡು, ಕಲೆಯನ್ನು ಸ್ಥಳೀಯ ಭಾಷೆಯಲ್ಲಿ ಬೆಳೆಸುವ ಒಂದು ಕಲೆ ಅಂದರೆ ಅದು ಜನಪದ ಕಲೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎನ್.ಬಲರಾಮ ತಿಳಿಸಿದರು.
ಕರ್ನಾಟಕ ಜನಪದ ಪರಿಷತ್ (ಯುನೆಸ್ಕೊ ಮಾನ್ಯತೆ ಪಡೆದ ಸಂಸ್ಥೆ) ಹಾಸನ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ , ಎಸ್‌ಆರ್‌ಎಸ್ ಪ್ರಜ್ಞ್ಞಾ ವಿದ್ಯಾಶಾಲೆ ಆಶ್ರಯದಲ್ಲಿ ಮಂಗಳವಾರ ಎಸ್‌ಆರ್‌ಎಸ್ ಪ್ರಜ್ಞ್ಞಾ ವಿದ್ಯಾಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಜನಪದ ದಿನಾಚರಣೆ ಮತ್ತು ಜನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲ್ಲೂ ಬಂದಿರುವ ಕಲೆಯೇ ಜನಪದ ಕಲೆ, ಜನಪದವು ಅಳವಾದ ಒಂದು ವಿಶೇಷ ಸಂಸ್ಕೃತಿಯಾಗಿದೆ. ಜನಪದ ಕಲೆ ಒಂದು ಮೌಖಿಕ ಕಲೆಯಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.
ಕರ್ನಾಟಕ ಜನಪದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಹಳ್ಳಿಯ ರೈತರು, ಶ್ರಮಿಕರು ತಮ್ಮ ಆಯಾಸ ಮರೆಯಲು ಹೊಲಗದ್ದೆಗಳಲ್ಲಿ ಹಾಡಿದ ಹಾಡುಗಳೇ ಜನಪದ ಗೀತೆಗಳು ಎಂದು ತಿಳಿಸಿದರು.
ಹಳ್ಳಿಯ ಜನರ ನಿಷ್ಕಲ್ಮಶ ಮನಸ್ಸಿನಿಂದ, ಶ್ರಮದ ಸಂಸ್ಕೃತಿಯಿಂದ ಸ್ವಾಭಾವಿಕವಾಗಿ ಹುಟ್ಟಿಕೊಂಡ ಕಲೆ ಜನಪದ. ಇದಕ್ಕೆ ಯಾವುದೇ ಲಿಖಿತ ರೂಪವಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಅಮೂಲ್ಯ ಕಲೆಯೇ ಜನಪದ ಕಲೆ ಎಂದು ಹೇಳಿದರು.
ಯುವಜನರಲ್ಲಿ ಹೆಚ್ಚು ಜನಪದ ಕಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದ ಅವರು, ಮಣ್ಣಿನ ಸಂಸ್ಕೃತಿಯನ್ನು ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಭಾರತ ಸಂಸ್ಕೃತಿಯ ಮೂಲ ಬೇರು ಎಂದರೆ ಜನಪದ ಕಲೆ, ಕಾಲಕಾಲಕ್ಕೆ ಅನುಗುಣವಾಗಿ ಜನಪದ ಹೊಸ ಅಧ್ಯಯನಗಳೊಂದಿಗೆ ಹುಟ್ಟುತ್ತ ಬೆಳೆಯುತ್ತಿದೆ ಎಂದು ಹೇಳಿದರು.