ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಾಸನ ನಗರದ ರೆಡ್ ಕ್ರಾಸ್ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಅನಿಮಿಯಾ ತಪಾಸಣೆ ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಡಾ.ಹೇಮಲತಾ ಪಟ್ಟಾಭಿ, ಎಚ್.ಪಿ. ಮೋಹನ್, ಶಬ್ಬೀರ್ ಅಹ್ಮದ್, ಅಮ್ಜದ್ ಖಾನ್, ಎಚ್.ಡಿ. ಕುಮಾರ್ ಇತರರಿದ್ದರು.
- ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಿ
- ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಸಲಹೆ
- ಹಾಸನದ ರೆಡ್ ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ
ಹಾಸನ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಕಲಿಕೆಗೆ ಹೆಚ್ಚು ಒತ್ತು ನೀಡಿ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಂಡ್ಯ, ಕೃಷಿ ಮಹಾ ವಿದ್ಯಾಲಯ ಕಾರೆಕೆರೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್. ಘಟಕಗಳ ಆಶ್ರಯದಲ್ಲಿ ಗುರುವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಗರದ ರೆಡ್ ಕ್ರಾಸ್ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಅನಿಮಿಯಾ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಕಾನೂನು ಪಾಲನೆ ಮಾಡುವ ಮೂಲಕ ಉತ್ತಮ ನಾಗರಿಕರಾಗಬೇಕು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಬಳಿಕ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕಿ ಡಾ.ಹೇಮಲತಾ ಪಟ್ಟಾಭಿ ಮಾತನಾಡಿ, ರಕ್ತದಾನವು ಶ್ರೇಷ್ಠ ದಾನವಾಗಿದೆ. ಒಬ್ಬ ರಕ್ತದಾನಿಯಿಂದ ಮೂರು ಜೀವಗಳನ್ನು ಉಳಿಸಬಹುದು ಎಂದರು. ರಕ್ತದಾನವು ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜತೆಗೆ ಜ್ಞಾಪಕ ಶಕ್ತಿ ಹಾಗೂ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ ಎಂದರು.
ಇದುವರೆಗೆ 46 ಬಾರಿ ರಕ್ತದಾನ ಮಾಡಿರುವ ಮೋಹನ್ ರಾಜ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಎನ್. ಮುನಿಸ್ವಾಮಿಗೌಡ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರ ಜತೆಗೆ ಅನಿಮಿಯಾ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಒಟ್ಟು 42 ಮಂದಿ ರಕ್ತದಾನ ಮಾಡಿದರು. 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಅನಿಮಿಯಾ ತಪಾಸಣೆಯ ಸದುಪಯೋಗ ಪಡೆದುಕೊಂಡರು. ರೆಡ್ ಕ್ರಾಸ್ ಸಭಾಪತಿ ಎಚ್.ಪಿ.ಮೋಹನ್, ಶಬ್ಬೀರ್ ಅಹ್ಮದ್, ಅಮ್ಜದ್ ಖಾನ್, ಎಚ್.ಡಿ. ಕುಮಾರ್, ಬಿ.ಆರ್.ಉದಯ್ ಕುಮಾರ್, ಬಿ.ಇ.ಶಿವರಾಮೇಗೌಡ, ಡಾ.ಎಸ್.ಟಿ.ಭೈರಪ್ಪನವರ್ ಹಾಗೂ ಡಾ. ಶಿವಬಸಪ್ಪ ಕಂದಕೂರು, ಡಾ. ಕಣವಿ, ಡಾ.ಪ್ರಕಾಶ್ ಕೊಳೇರ್, ಡಾ.ಮಂಜುನಾಥ್, ಡಾ.ಸಿ.ಟಿ.ಭರತ್ ಪ್ರಸಾದ್, ಡಾ.ಶಶಿಕಲಾ ಇತರರಿದ್ದರು.