ಹೊಳೆನರಸೀಪುರ ತಾಲೂಕಿನ ಬೆಟ್ಟದ ಸಾತ್ಯನಹಳ್ಳಿ ಗ್ರಾಮದಲ್ಲಿ ಹಾಲಿನ ಡೇರಿಯನ್ನು ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಿದರು. ಡೇರಿ ವಿಸ್ತರಣಾಧಿಕಾರಿ ಪುರುಷೋತ್ತಮ್, ಗ್ರಾಮದ ಮಲ್ಲೇಶ್ ಚಂದ್ರಪ್ಪ ಬಸಪ್ಪ ಇದ್ದರು.
- ಶಾಸಕ ಎಚ್.ಡಿ.ರೇವಣ್ಣ ಸಲಹೆ
- ನಂದಿನಿ ಕೇಂದ್ರ ಉದ್ಘಾಟನೆ
ಹೊಳೆನರಸೀಪುರ: ರೈತರು ಹಸು ಸಾಕಣೆಯಿಂದ ಹೈನುಗಾರಿಕೆಗೆ ಬೆಂಬಲವಾಗಿದ್ದಾರೆ. ಇದರ ಜತೆ ಯಥೇಚ್ಛವಾಗಿ ತರಕಾರಿಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.
ತಾಲೂಕಿನ ಬೆಟ್ಟದ ಸಾತೇನಹಳ್ಳಿ ಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ನಂದಿನಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆಯಿಂದ ರೈತರ ಕುಟುಂಬ ನಿರ್ವಹಣೆ ಉತ್ತಮವಾಗಿದೆ. ಹಾಗೆಯೇ ಜಮೀನಿನಲ್ಲಿ ಉತ್ತಮ ಬೆಳೆಗಳನ್ನು ಬೆಳೆಯುವುದಕ್ಕೂ ಗಮನಹರಿಸಬೇಕು. ಕೆಲವು ಪರ್ಯಾಯ ಸೊಪ್ಪು, ತರಕಾರಿಗಳನ್ನು ಬೆಳೆದು, ದಿನನಿತ್ಯದ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ತಾವು ಸಾಕಿದ ಹಸುಗಳಿಗೆ ವಿಮೆ ಮಾಡಿಸಬೇಕು. ಒಂದು ಹಸುವಿಗೆ ಏಳು ನೂರು ರೂಪಾಯಿ ಪಾವತಿಸಿದರೆ ಉಳಿದ ಹಣವನ್ನು ಮಂಡಳಿ ವತಿಯಿಂದ ಕೊಡಲಾಗುತ್ತದೆ. ಅನಾರೋಗ್ಯದಿಂದ ಹಸು ಸತ್ತರೆ 70 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ ಎಂದರು.
ಬೆಟ್ಟದ ಸಾತೇನಹಳ್ಳಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಇಲ್ಲಿಯವರೆಗೂ ನೀಡಿದ್ದೇನೆ. ದೇವಸ್ಥಾನದ ಅಭಿವೃದ್ಧಿ, ಗ್ರಾಮದ ಬೀದಿಗಳ ಅಭಿವೃದ್ಧಿ ಮಾಡಿದ್ದೇನೆ. ಬೆಟ್ಟದ ರಸ್ತೆಯನ್ನು ರೇವಣ್ಣ ಅಭಿವೃದ್ಧಿ ಮಾಡಿದರೆ ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದು ಯಾರೋ ಚಾಲೆಂಜ್ ಮಾಡಿದ್ದಾರೆ. ನೋಡೋಣ ಈ ರಸ್ತೆಯನ್ನು ನಾನೇ ಅಭಿವೃದ್ಧಿ ಮಾಡುತ್ತೇನೆ. ಬೇರೆ ಯಾರಾದರೂ ಇಲ್ಲಿಯವರೆಗೆ ಈ ಗ್ರಾಮಕ್ಕೆ ಅನುದಾನ ನೀಡಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು. ಗ್ರಾಮದ ಯಾವುದೇ ಸಮಸ್ಯೆಗಳಿದ್ದರೆ ಬನ್ನಿ ಪರಿಹರಿಸುತ್ತೇನೆ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.
ಗ್ರಾಮದಲ್ಲಿ ಕಳ್ಳತನವಾಗಿದ್ದರೂ ಪ್ರಕರಣ ಭೇದಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಣ ನೀಡಿದರೆ ಬಿಟ್ಟು ಕಳಿಸುತ್ತಾರೆ. ಅವರನ್ನು ಪತ್ತೆ ಹಚ್ಚುವುದು ಎಲ್ಲಿಂದ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡೇರಿ ಕಾರ್ಯದರ್ಶಿ ಮೋಹನ್ ರಾಜ್, ಗ್ರಾಮದ ಹಿರಿಯರಾದ ಬಸಪ್ಪ, ಚಂದ್ರಣ್ಣ, ಮಲ್ಲೇಶ್, ಚಂದ್ರಪ್ಪ, ಪ್ರಕಾಶ್ ವಿಸ್ತರಣಾಧಿಕಾರಿ ಪುರುಷೋತ್ತಮ್ ಇತರರು ಇದ್ದರು.