ಸಿಎಸ್‌ಐಆರ್ ರಾಷ್ಟ್ರೀಯ ಸಸ್ಯಶಾಸ್ತ್ರೀಯ ಸಂಶೋಧನಾ ಸಂಸ್ಥೆ
- ಸಿಎಸ್‌ಐಆರ್ ರಾಷ್ಟ್ರೀಯ ಸಸ್ಯಶಾಸ್ತ್ರೀಯ ಸಂಶೋಧನಾ ಸಂಸ್ಥೆಯಿಂದ ಕೊಡುಗೆ
ಅರಸೀಕೆರೆ ಗ್ರಾಮಾಂತರ : ಲಕ್ನೋದಲ್ಲಿರುವ ಸಿಎಸ್‌ಐಆರ್ ರಾಷ್ಟ್ರೀಯ ಸಸ್ಯಶಾಸ್ತ್ರೀಯ ಸಂಶೋಧನಾ ಸಂಸ್ಥೆಯು ಪುಷ್ಪ ಕೃಷಿ ಮಿಷನ್ ಯೋಜನೆ ಬೆಲವತ್ತಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿದ ಹೂವಿನ ತೋಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಈ ಯೋಜನೆಯಡಿ ಹೂವಿನ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದರ ಜತೆಗೆ, ಫಲಾನುಭವಿಗಳಿಗೆ ಹಾಗೂ ಶಾಲೆಗಳಿಗೆ ಹೂವಿನ ತೋಟಗಳನ್ನು ನಿರ್ಮಿಸಿಕೊಡಲಾಗುತ್ತದೆ. ಈ ವರ್ಷ ಸಿಎಸ್‌ಐಆರ್-ಎನ್‌ಬಿಆರ್‌ಐ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಲವತ್ತಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಹೂವಿನ ತೋಟವನ್ನು ನಿರ್ಮಿಸಿಕೊಟ್ಟಿದೆ. ರೈತರು ಹೂವಿನ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದು ಮತ್ತು ಭಾರತವನ್ನು ಹೂವಿನ ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದೂ ಅಲ್ಲದೆ, ಪುಷ್ಪ ಕೃಷಿಯಲ್ಲಿ ಯುವ ರೈತರಿಗೆ ಉದ್ಯಮಶೀಲ ಅವಕಾಶವನ್ನು ಒದಗಿಸುವುದು, ಹೊಸ ಬಗೆಯ ಹೂವುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಶಾಲಾ ಮಕ್ಕಳಲ್ಲಿ ಪುಷ್ಪ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವುದು ಯೋಜನೆ ಉದ್ದೇಶವಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಚಿತ್ರದುರ್ಗ, ವಿಜಯನಗರ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ಈ ಪ್ರದೇಶಗಳಲ್ಲಿ ನೂರಾರು ರೈತರಿಗೆ ಚೆಂಡು ಹೂವು, ಗುಲಾಬಿ, ಸುಗಂಧ ರಾಜ, ಮಲ್ಲಿಗೆ ಗಿಡಗಳನ್ನು ಉಚಿತವಾಗಿ ನೀಡಲಾಗಿದೆ. ಅಲ್ಲದೆ, ಜೇನು ಕೃಷಿಗಾಗಿ 200 ಜೇನು ಪೆಟ್ಟಿಗೆಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.
ಸಿಎಸ್‌ಐಆರ್-ಎನ್‌ಬಿಆರ್‌ಐ ಮುಖ್ಯ ವಿಜ್ಞಾನಿ ಡಾ. ಸಂಜೀವ ನಾಯಕ ಮಾತನಾಡಿ, ಸಂಸ್ಥೆ ವತಿಯಿಂದ ನಿರ್ಮಿಸಿಕೊಟ್ಟಿರುವ ಹೂದೋಟವನ್ನು ನಿರ್ವಹಣೆ ಮಾಡುವುದು ಮಕ್ಕಳ ಕರ್ತವ್ಯ. ಹೂವಿನ ಗಿಡಗಳನ್ನು ರಕ್ಷಿಸುವಂತೆ ಪ್ರಕೃತಿಯನ್ನು ರಕ್ಷಿಸಬೇಕು, ಆಗ ಮಾತ್ರ ನಾವು ಪ್ರಕೃತಿ ವಿಕೋಪ ತಪ್ಪಿಸಬಹುದು ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎ.ಎಚ್.ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಇ.ಶಂಕರ್, ಎಸ್‌ಡಿಎಂಸಿ ಉಪಾಧ್ಯಕ್ಷ ಚಂದ್ರೇಗೌಡ, ಗ್ರಾಪಂ ಸದಸ್ಯರಾದ ರೇಣುಕಾ ಹನುಮೇಗೌಡ, ಕೋಮಲಾ ಶಿವರಾಜ್, ಸೋಮ ಶೇಖರ್, ಬಾಗೇಶಪುರ ಕ್ಲಸ್ಟರ್, ಸಮೂಹ ಸಂಪನ್ಮೂಲ ವ್ಯಕ್ತಿ ಶಿವಾನಂದ ನಾಯ್ಕ, ಶಿಕ್ಷಕರಾದ ಹರೀಶ್, ರೇಖಾ, ರೇಖಮ್ಮ, ರವಿಕುಮಾರ್, ನಾರಾಯಣ್ ಸ್ವಾಮಿ ಮತ್ತು ಮಂಜುನಾಥ್, ಪಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.