ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬಿ.ಸಮುದ್ರವಳ್ಳಿ ಗ್ರಾಮದ ಯುವ ರೈತ ಬಿ.ಎನ್.ದೊರೆಸ್ವಾಮಿ ಬೆಳೆದಿರುವ ಜಿಪ್ಸೊಫಿಲಾ ಅಲಂಕಾರಿಕ ಹೂವು. 
ಹಾಸನ

ಮೊಗದಲ್ಲಿ ನಗು ತಂದ ಪುಷ್ಪ ಕೃಷಿ

ಪ್ರಮುಖ ಮುಖ್ಯಾಂಶಗಳು

  • ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ
  • 5.30 ಎಕರೆ ಜಮೀನಿನಲ್ಲಿ ಬಗೆ ಬಗೆಯ ಹೂ
ಚನ್ನರಾಯಪಟ್ಟಣ: ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ಸುಮಾರು 5.30 ಎಕರೆ ಜಮೀನಿನಲ್ಲಿ ಬಗೆ ಬಗೆಯ ಹೂ ಬೆಳೆದು ಆದಾಯ ಗಳಿಸುವ ಮೂಲಕ ಇಲ್ಲೊಬ್ಬ ರೈತ ಹೂನಗು ಬೀರುತ್ತಿದ್ದಾರೆ.
ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬಿ.ಸಮುದ್ರವಳ್ಳಿ ಗ್ರಾಮದ ಯುವ ರೈತ ಬಿ.ಎನ್.ದೊರೆಸ್ವಾಮಿ 9 ವರ್ಷಗಳಿಂದ ಪುಷ್ಪ ಕೃಷಿ ಮಾಡುತ್ತಿದ್ದು, ಆರಂಭದಲ್ಲಿ ಎಲ್ಲರಂತೆ ನಷ್ಟ ಅನುಭವಿಸಿದರು. ಆದರೆ ಛಲ ಬಿಡದೆ ವೈಜ್ಞಾನಿಕ ಪದ್ಧತಿಯನ್ನು ಹಂತ ಹಂತವಾಗಿ ಅಳವಡಿಸಿಕೊಂಡು ಇದೀಗ ಯಶಸ್ವಿಯಾಗಿ ಬಗೆಬಗೆಯ ಹೂಗಳನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.
ಆರಂಭದಲ್ಲಿ ಸ್ವಂತ ವ್ಯಾಪಾರ, ಕಂಟ್ರಾೃಕ್ಟ್ ಕೆಲಸ ಮಾಡಿದರು. ಆದರೆ ಯಶಸ್ಸು ಸಿಗಲಿಲ್ಲ. ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಕೃಷಿ ಮಾಡಲು ಆಲೋಚಿಸಿ ಕೊಳವೆಬಾವಿ ಕೊರೆಸಿದರು. ಆದರೆ ನೀರು ಬಾರದ ಕಾರಣ ತಮ್ಮ ಮನೆ ಬಳಿಯೇ ಕೊಳವೆ ಬಾವಿ ಕೊರೆಸಿ ಎರಡು ಕಿ.ಮೀ. ದೂರವಿರುವ ಜಮೀನಿಗೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಿ ಕೃಷಿ ಹೊಂಡ ತೋಡಿಸಿ ನೀರು ಸಂಗ್ರಹಣೆ ಮಾಡಿದರು. ಆರಂಭದಲ್ಲಿ ತರಕಾರಿ ಬೆಳೆದರಾದರೂ ಮಧ್ಯವರ್ತಿಗಳಿಂದಾಗಿ ಲಾಭ ಸಿಗಲಿಲ್ಲ. ನಂತರ ಹೂ ಬೆಳೆಯಲು ನಿರ್ಧರಿಸಿ ಅನುವಿ ರೈತರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ಮಾಲೂರು, ದೊಡ್ಡಬಳ್ಳಾಪುರ, ಮೈಸೂರು, ಬೆಂಗಳೂರು ಸೇರಿದಂತೆ ಹೆಚ್ಚು ಹೂ ಬೆಳೆಯುವ ಪ್ರದೇಶಗಳಲ್ಲಿ ಸುತ್ತಾಡಿ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.
ಪಟ್ಟಣದ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಕೃಷಿ ಭಾಗ್ಯ ಯೋಜನೆ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಡಿ ಒಂದು ಎಕರೆ ಜಮೀನಿನಲ್ಲಿ ಪಾಲಿ ಹೌಸ್ ನಿರ್ಮಾಣ ಮಾಡಿ ವಿವಿಧ ರೀತಿಯ ಹೂವಿನ ಸಸಿಗಳನ್ನು ತಮಿಳುನಾಡು, ಕೋಲ್ಕತ್ತ, ಬಾಂಬೆ ಹೀಗೆ ಬೇರೆ ಬೇರೆ ರಾಜ್ಯಗಳಿಂದ ತಂದು ನಾಟಿ ಮಾಡಿದರು. ಪಾಲಿಹೌಸ್‌ನಲ್ಲಿ ಗುಲಾಬಿ, ಸೇವಂತಿಗೆ, ಟ್ಯೂಬೆರೋಸ್, ಲಿಮೋನಿಯಂ, ಅಲಂಕಾರಿಕ ಎಲೆ ಸೇರಿದಂತೆ ಅಲಂಕಾರಿಕ ಹೂಗಳನ್ನು ಬೆಳೆದು ಇದೀಗ ವಾರ್ಷಿಕ 15 ರಿಂದ 18 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಇವರ ಕಾಯಕಕ್ಕೆ ಪತ್ನಿ ಜಿ.ಕೆ.ಕವಿತಾ ಸಾಥ್ ನೀಡುತ್ತಿದ್ದಾರೆ.
ಮಾರುಕಟ್ಟೆ ದರದ ಮೇಲೆ ಲಾಭ ಅವಲಂಬಿತ: ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿನ ದರ ಎಷ್ಟಿರುತ್ತದೆಯೋ ಅದರ ಮೇಲೆ ನಮ್ಮ ಲಾಭವೂ ನಿಂತಿರುತ್ತದೆ. ಸಂಕ್ರಾಂತಿ, ಸಂದರ್ಭದಲ್ಲಿ ಕೆಜಿಗೆ 150 ರೂ.ನಿಂದ 200 ರೂ.ವರೆಗೆ ದರ ಇತ್ತು. ಈಗ ಕೆ.ಜಿ.ಗೆ 60 ರೂ. ಆಗಿದೆ. ಶಿವರಾತ್ರಿ, ಯುಗಾದಿ, ಗೌರಿ- ಗಣೇಶ, ಆಯುಧ ಪೂಜೆ, ದೀಪಾವಳಿ ಹೊತ್ತಿಗೆ ಬೆಲೆ ಏರುತ್ತದೆ. ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಏರಿದಾಗ ನಮಗೂ ಹೆಚ್ಚಿನ ಲಾಭ ಬರುತ್ತದೆ. ಹಬ್ಬಗಳು ಮಾತ್ರವಲ್ಲದೆ, ಹತ್ತಿರದ ಹಳ್ಳಿಗಳಲ್ಲಿ ಜಾತ್ರೆಗಳು, ಉತ್ಸವಗಳು ನಡೆದಾಗಲೂ ಹೂವಿನ ಬೆಲೆ ಏರಿಕೆಯಾಗುತ್ತದೆ ಎನ್ನುತ್ತಾರೆ ರೈತ ದೊರೆಸ್ವಾಮಿ.
ಖರ್ಚು-ವೆಚ್ಚ: ಜಮೀನಿನ ಉಳುಮೆ, ಸಸಿ, ರಸಗೊಬ್ಬರ, ಕಾರ್ಮಿಕರ ಕೂಲಿ ಎಲ್ಲ ಸೇರಿ ಸುಮಾರು 10 ಲಕ್ಷರು ಖರ್ಚು ತಗುಲಲಿದೆ. ಹೂವಿನ ಮಾರಾಟದಿಂದ ನಿರಂತರವಾಗಿ ಆದಾಯ ಬರುತ್ತಿರುವುದರಿಂದ ಖರ್ಚಿಗೆ ಹಣದ ಸಮಸ್ಯೆಯಾಗಿಲ್ಲ. ಹೂಗಳ ಮಾರಾಟದಿಂದ ವರ್ಷಕ್ಕೆ 15 ರಿಂದ 18 ಲಕ್ಷ ರೂ. ಆದಾಯ ಸಿಗುತ್ತಿದೆ. ಹೂವುಗಳನ್ನು ಬೆಂಗಳೂರು, ಮೈಸೂರು ಹಾಗೂ ಚನ್ನರಾಯಪಟ್ಟಣ, ಇತರ ನಗರಗಳ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.
ಹಲವು ಬಗೆಯ ಅಲಂಕಾರಿಕ ಫ್ಲವರ್: ಒಂದು ಎಕರೆಯಲ್ಲಿ ಪಾಲಿಹೌಸ್ ನಿರ್ಮಿಸಿದ್ದರೆ, ಇನ್ನೊಂದು ಎಕರೆಯಲ್ಲಿ ಜಿಪ್ಸೊಫಿಲಾ ಎಂಬ ಅಲಂಕಾರಿಕ ಹೂವು ಬೆಳೆದು ಬೆಂಗಳೂರಿಗೆ ರಫ್ತು ಮಾಡುತ್ತಾರೆ. ಈ ಒಂದು ಹೂವಿನಿಂದಲೇ ಪ್ರತಿ ವರ್ಷ 5 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಭೋಗ್ಯದ ಆಧಾರದ ಮೇಲೆ ಮಾಡಿಕೊಂಡಿರುವ ಜಮೀನಿನಲ್ಲಿ 30,000 ಸೇವಂತಿ ಗಿಡಗಳನ್ನು ಬೆಳೆದಿದ್ದು ವಾರ್ಷಿಕ 8 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಎರಡು ಎಕರೆಯಲ್ಲಿ 7,000 ಮೆರಾಬಲ್ ಗುಲಾಬಿ ಬೆಳೆಸಿದ್ದಾರೆ. ಸಸಿ ನಾಟಿ, ಗೊಬ್ಬರ ಎಲ್ಲ ಸೇರಿ ಪ್ರತಿ ಗಿಡಕ್ಕೆ ಸುಮಾರು 25 ರೂ. ವ್ಯಯವಾಗಲಿದ್ದು, ವರ್ಷಪೂರ್ತಿ ಹೂ ಸಿಗುತ್ತದೆ. ಪ್ರತಿ ದಿನ 100ರಿಂದ 150 ಕೆಜಿ ಹೂ ಸಿಗುತ್ತದೆ. ಒಂದು ಕೆಜಿ ಹೂವಿನ ದರ 150 ರೂ. ಇದೆ. ವಾರ್ಷಿಕ ಗುತ್ತಿಗೆ ನೀಡುವುದರಿಂದ ಗುಲಾಬಿ ಹೂ ಮಾರಾಟದಿಂದ ತಿಂಗಳಿಗೆ ಲಕ್ಷ ರೂ. ಆದಾಯ ಇದೆ. ಅಲಂಕಾರಿಕ ಹೂ, ಗುಲಾಬಿ ಹಾಗೂ ಸೇವಂತಿಗೆಯಿಂದ ಎಲ್ಲ ಖರ್ಚು ತೆಗೆದು ವಾರ್ಷಿಕ 18 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.
ನಷ್ಟ ತಪ್ಪಿಸುವ ದಾರಿಗಳು: ದೊರೆಸ್ವಾಮಿ ಅವರು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾಗ ಆದಾಯಕ್ಕಾಗಿ ದೀರ್ಘ ಅವಧಿಯವರೆಗೆ ಕಾಯಬೇಕಿತ್ತು. ಆದರೆ ಹೂವಿನ ಬೆಳೆಗಳು ಹಾಗಲ್ಲ. ಪ್ರತಿ ತಿಂಗಳೂ ಆದಾಯ ನೀಡುತ್ತಿವೆ. ಇನ್ನೊಂದು ವಿಶೇಷ ಎಂದರೆ, ದೊರೆಸ್ವಾಮಿ ಅವರು ಒಂದೇ ಬಗೆಯ ಹೂ ಬೆಳೆಯುತ್ತಿಲ್ಲ. ಬಗೆ ಬಗೆಯ ಹೂಗಳು ಬೆಳೆಯುವುದರಿಂದ ಹಾಗೂ ತಿಂಗಳು, ವಾರ್ಷಿಕ ದರ ಗುತ್ತಿಗೆ ಮಾಡುವುದರಿಂದ ದರ ಕುಸಿತ ಹಾಗೂ ನಷ್ಟದ ಸಮಸ್ಯೆ ಅವರಿಗೆ ಇಲ್ಲವೇ ಇಲ್ಲ ಎನ್ನಬಹುದು.
ತಂತ್ರಜ್ಞಾನ ಬಳಸಿ ಪಾಲಿಹೌಸ್(ಹಸಿರು ಮನೆ) ಮತ್ತು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರು, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಗುಲಾಬಿ, ಜರ್ಬೆರಾ, ಕಾರ್ನೇಷನ್ ಮತ್ತು ಸೇವಂತಿಗೆಯಂತಹ ಅಲಂಕಾರಿಕ ಹೂವುಗಳ ಆಯ್ಕೆ ಮಾಡಿ ಬೆಳೆಯುತ್ತಾರೆ. ಮಧ್ಯವರ್ತಿಗಳಿಲ್ಲದೆ ಮಾರುಕಟ್ಟೆಗೆ ಹೂವುಗಳನ್ನು ತಲುಪಿಸಲಿದ್ದಾರೆ.
ರೈತರು ನಿರೀಕ್ಷೆಗಿಂತ ದುಡಿಮೆಗೆ ಹೆಚ್ಚು ಆದ್ಯತೆ ನೀಡಬೇಕು. ಭೂಮಿಯನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು. ಭೂಮಿ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ನಾನು 30 ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದೇನೆ. ಗೌರವಯುತ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ನಮ್ಮ ಜಮೀನಿಗೆ ಜಿಲ್ಲೆ, ರಾಜ್ಯ ಹಾಗೂ ಕೇಂದ್ರದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬಿ.ಎನ್.ದೊರೆಸ್ವಾಮಿ ಪುಷ್ಟ ಕೃಷಿಕ, ಬಿ.ಸಮುದ್ರವಳ್ಳಿ
ರೈತರು ಕೃಷಿಯಿಂದ ವಿಮುಖರಾಗದೆ ತೋಟಗಾರಿಕೆ ಅಧಿಕಾರಿಗಳನ್ನು ಭೇಟಿಯಾಗಿ, ಕ್ರಿಯಾಯೋಜನೆ ತಯಾರಿಸಿಕೊಂಡು ಸರ್ಕಾರದ ವಿವಿಧ ಯೋಜನೆಗಳ ಅನುದಾನದಲ್ಲಿ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಂಡರೆ ಕೃಷಿಯಲ್ಲಿ ಯಶಸ್ವಿಯಾಗಬಹುದು. ಇಂದಿನ ದಿನಗಳಲ್ಲಿ ಕೃಷಿಯನ್ನು ಅಪ್ಪಿಕೊಂಡು ಅದರಲ್ಲಿ ಯಶಸ್ಸನ್ನು ಕಂಡ ಯುವ ತಲೆಮಾರಿಗೆ ಬಿ.ಎನ್.ದೊರೆಸ್ವಾಮಿ ಉದಾಹರಣೆಯಾಗುತ್ತಾರೆ.
ಸಿ.ಮಂಜುನಾಥ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಚನ್ನರಾಯಪಟ್ಟಣ